ಬರ್ಮಿಂಗ್‌ಹ್ಯಾಮ್ : ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಗೇಮ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೇರಿದ್ದು ಚಿನ್ನದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್ ಕೂಡ ಚೊಚ್ಚಲ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ.
ಅಮೋಘದ ಆಟದ ಪ್ರದರ್ಶನ ನೀಡಿದ ಸಿಂಧು ಅವರು ಸಿಂಗಾಪುರದ ಯೆಯೊ ಜಿಯಾ ಮಿನ್ ಅವರನ್ನು 21-19, 21-17 ಗೇಮ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿ ಫೈನಲಿಗೇರಿದರು. ಸಿಂಧು ಈ ಹಿಂದೆ 2018ರಲ್ಲಿ ಬೆಳ್ಳಿ ಮತ್ತು 2014ರಲ್ಲಿ ಕಂಚು ಜಯಿಸಿದ್ದರು. ಈ ಬಾರಿ ಚಿನ್ನಕ್ಕೆ ಗುರಿ ಇಟ್ಟುಕೊಂಡಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ವಿಶ್ವದ 10ನೇ ರ್‍ಯಾಂಕಿನ ಲಕ್ಷ್ಯ ಸೇನ್ ಸಿಂಗಾಪುರದ ಜಿಯಾ ಹೆಂಗ್ ತೇಹ್ ಅವರನ್ನು 21-10, 18-21, 21-16 ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಫೈನಲಿಗೇರಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಶ್ಯದ ಚೆನ್ ಪೆಂಗ್ ಸೂನ್ ಮತ್ತು ತಿಯಾನ್ ಮೆನ್ ಅವರನ್ನು 21-6, 21-15 ಗೇಮ್‌ಗಳಿಂದ ಉರಉಳಿಸಿ ಫೈನಲಿಗೇರಿದ್ದಾರೆ.
ಮಾತ್ರವಲ್ಲದೇ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮೂರನೇ ಚಿನ್ನದ ನಿರೀಕ್ಷೆ ಹುಟ್ಟಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ 13ನೇ ರ್‍ಯಾಂಕಿನ ಶ್ರೀಕಾಂತ್ ಸೆಮಿಫೈನಲ್‌ನಲ್ಲಿ ಮಲೇಶ್ಯದ ಟಿಝಿ ಯಂಗ್ ಎನ್‌ಜಿ ಅವರಿಗೆ ಕಠಿನ ಹೋರಾಟದಲ್ಲಿ 21-13, 19-21, 21-10 ಅಂತರದಿಂದ ಸೋಲುವ ಮೂಲಕ ಫೈನಲ್ ಭಾರತೀಯರ ನಡುವೆ ನಡೆಯುವ ಸಾಧ್ಯತೆಯನ್ನು ತಪ್ಪಿಸಿದರು. ಕಳೆದ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಶ್ರೀಕಾಂತ್ ಇನ್ನು ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.