ಬರ್ಮಿಂಗ್ಹ್ಯಾಮ್: ಪುರುಷರ 10,000 ಮೀ. ನಡಿಗೆಯಲ್ಲಿ ಭಾರತದ ಸಂದೀಪ್ ಕುಮಾರ್ ತನ್ನ ವೈಯಕ್ತಿಕ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
38:49.21 ಸೆ.ನಲ್ಲಿ ಗುರಿ ತಲುಪಿದ ಸಂದೀಪ್ ಮೂರನೇ ಸ್ಥಾನ ಪಡೆದರು. ಕೆನಡಾದ ಇವಾನ್ ಡನ್ಫಿ (38:36.37 ಸೆ.) ಚಿನ್ನ ಮತ್ತು ಆಸ್ಟ್ರೇಲಿಯದ ಡೆಕ್ಲಾನ್ ತಿಂಗಯ್ (38:42.33 ಸೆ.) ಬೆಳ್ಳಿ ಗೆದ್ದರು. ಕಣದಲ್ಲಿದ್ದ ಭಾರತದ ಇನ್ನೋರ್ವ ಸ್ಪರ್ಧಿ ಅಮಿತ್ ಖತ್ರಿ 9ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ಜಾವೆಲಿನ್: ಅನ್ನು ರಾಣಿಗೆ ಕಂಚು
ಭಾರತದ ಅನ್ನು ರಾಣಿ ಗೇಮ್ಸ್‌ನ ಜಾವೆಲಿನ್ ಸ್ಪರ್ಧೆಯಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪದಕ ಗೆದ್ದ ದೇಶದ ಮೊದಲ ವನಿತೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ತನ್ನ ನಾಲ್ಕನೇ ಪ್ರಯತ್ನದಲ್ಲಿ 60 ಮೀ. ದೂರ ಎಸೆದ ರಾಣಿ ಕಂಚಿನ ಪದಕ ಜಯಿಸಿದರು.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಕೆಲ್ಸೆ-ಲೀ ಬಾರ್ಬರ್ ತನ್ನ ಅಂತಿಮ ಪ್ರಯತ್ನದಲ್ಲಿ 64.43 ಮೀ. ದೂರ ಎಸೆಯುವ ಮೂಲಕ ಚಿನ್ನ ಗೆದ್ದರು. ಈ ಎಸೆತಕ್ಕಿಂತ ಮೊದಲು ಮುನ್ನಡೆಯಲ್ಲಿದ್ದ ಅದೇ ದೇಶದ ಮೆಕೆಂಝಿ ಲಿಟಲ್ (64.27 ಮೀ.) ಬೆಳ್ಳಿ ಗೆದ್ದರು.
ರಾಣಿ ಅವರಿಗಿಂತ ಮೊದಲು ಕಾಶಿನಾಥ್ ನಾೖಕ್ 2010ರ ದಿಲ್ಲಿ ಗೇಮ್ಸ್‌ನಲ್ಲಿ ಕಂಚು ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ 2018ರ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು.