Advertisement

ಬಾಕ್ಸಿಂಗ್‌: ಫೈನಲ್‌ಗೆ ಮೇರಿ ಕೋಮ್‌

06:00 AM Apr 12, 2018 | Team Udayavani |

ಗೋಲ್ಡ್‌ಕೋಸ್ಟ್‌: ಇದೇ ಮೊದಲ ಬಾರಿಗೆ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಸ್ಟಾರ್‌ ಬಾಕ್ಸರ್‌ ಮೇರಿ ಕೋಮ್‌ ಬುಧವಾರ ನಡೆದ ವನಿತೆಯರ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್‌ ಮೇರಿಗೆ ಚಿನ್ನ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ವಿಕಾಸ್‌ ಕೃಷ್ಣನ್‌ (75 ಕೆಜಿ), ಗೌರವ್‌ ಸೋಲಂಕಿ (52 ಕೆಜಿ) ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಾತ್ರಿಗೊಳಿಸಿದ್ದಾರೆ.

Advertisement

ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಮೇರಿ ಕೋಮ್‌ ಅವರು ಹಾಲಿ ಚಾಂಪಿಯನ್‌ ಶ್ರೀಲಂಕಾದ ಅನುಷಾ ದಿಲುÅಕ್ಷಿ ಕೊಡಿದಿವಕ್ಕು ಅವರನ್ನು 5-0 ಅಂತರದಿಂದ ಕೊಡವಿದರು. 35ರ ಹರೆಯದ ಭಾರತೀಯ ಮತ್ತು 39ರ ಹರೆಯದ ಶ್ರೀಲಂಕಾ ಆಟಗಾರ್ತಿಯ ಈ ಕಾದಾಟ ಇಬ್ಬರು ಅನುಭವಿ ಬಾಕ್ಸರ್‌ಗಳ ನಡುವಿನ ಮೇಲಾಟವಾಗಿತ್ತು ಎನ್ನುವುದು ವಿಶೇಷ.

ಜಾಣ ಪಂಚ್‌
ತನಗಿಂತಲೂ ಎತ್ತರವಾಗಿದ್ದ ಎದುರಾಳಿ ಅದರ ಅನುಕೂಲ ಪಡೆದರೂ ಕುಗ್ಗದ ಮೇರಿ ಮೇಲುಗೈ ಸಾಧಿಸುತ್ತ ಹೋದರು. ಕೊಡಿದಿವಕ್ಕು ಅವರು ಪ್ರಮುಖ ಪಂಚ್‌ಗಳನ್ನು ನೀಡಲು ಪರದಾಡಿದರು. ಕೊನೆಯ 3  ನಿಮಿಷಗಳಲ್ಲಿ ಎದುರಾಳಿಯು ಗುದ್ದಾಟದಲ್ಲಿ ಕೊಂಚ ವೇಗವನ್ನು ಗಳಿಸಿದರಾದರೂ ಅನುಭವಿ ಬಾಕ್ಸರ್‌ ಮೇರಿ ಸಮಯ ವ್ಯಯಿಸಿ ಜಾಣತನ ಮೆರೆದು ಗೆಲುವನ್ನು ತನ್ನಡೆಗೆ ಸೆಳೆದುಕೊಂಡರು.

ಮೇರಿ ಕೋಮ್‌ ಫೈನಲ್‌ ಸ್ಪರ್ಧೆಯಲ್ಲಿ ಉತ್ತರ ಅಯರ್‌ಲ್ಯಾಂಡ್‌ನ‌ ಕ್ರಿಸ್ಟಿನಾ ಓ’ಹರ ಅವರನ್ನು ಎದುರಿಸಲಿದ್ದಾರೆ. ಅಯರ್‌ಲ್ಯಾಂಡಿನಲ್ಲಿ ನರ್ಸಿಂಗ್‌ ಹೋಮ್‌ ಒಂದನ್ನು ನಡೆಸುತ್ತಿರುವ ಓ’ಹರ ನ್ಯೂಜಿಲ್ಯಾಂಡಿನ 19ರ ಹರೆಯದ ಟಸ್ಮಿನ್‌ ಬೆನ್ನಿ ಅವರನ್ನು ಕೆಡವಿದರು. ಇನ್ನೊಂದು ಪಂದ್ಯದಲ್ಲಿ ಎಲ್‌. ಸರಿತಾ ದೇವಿ (60 ಕೆಜಿ) ಅವರು ಆಸ್ಟ್ರೇಲಿಯದ ಅಂಜಾ ಸ್ಟ್ರಿಡ್ಸ್‌ ಮನ್‌ ಅವರೆದುರು ಪರಾಭವಗೊಂಡು ಪದಕ ಸ್ಪರ್ಧೆಯಿಂದ ಹೊರಬಿದ್ದರು.

ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಗೌರವ್‌ ಸೋಲಂಕಿ ಅವರು ಪಪುವ ನ್ಯೂಗಿನಿಯ ಚಾರ್ಲ್ಸ್‌ ಕೀಮ ಅವರನ್ನು 5-0 ಅಂತರದಿಂದ ಕೆಡವಿದರು. ಮಾಜಿ ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ವಿಕಾಸ್‌ ಕೃಷ್ಣನ್‌ ಜಾಂಬಿಯಾದ ಬೆನ್ನಿ ಮುಝಿಯೋ ವಿರುದ್ಧ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು.

Advertisement

ಪುರುಷರಿಗೆ ಪದಕ ಖಾತ್ರಿ 
ಪುರುಷರ ವಿಭಾಗದಲ್ಲಿ ಗೌರವ್‌ ಸೋಲಂಕಿ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ವಿಕಾಸ್‌ ಕೃಷ್ಣನ್‌ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಪದಕ ಖಾತ್ರಿ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next