ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯ): ಪ್ರತಿಷ್ಠಿತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಭಾರತದ ಪಡೆ ಯೊಂದು ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ಗೆ ಬಂದಿಳಿದಿದೆ. ಇದರಲ್ಲಿ ಸುಮಾರು 200 ಮಂದಿಯಿದ್ದಾರೆ.
ಆ್ಯತ್ಲೀಟ್ಸ್, ಬಾಕ್ಸಿಂಗ್, ಬಾಸ್ಕೆಟ್‌ಬಾಲ್, ಹಾಕಿ, ಲಾನ್ ಬೌಲಿಂಗ್ ಮತ್ತು ಶೂಟಿಂಗ್ ಸ್ಪರ್ಧಿಗಳು ಬೇರೆ ಬೇರೆ ತಂಡಗಳಾಗಿ ಬಂದು ಗೇಮ್ಸ್ ವಿಲೇಜ್ ಸೇರಿಕೊಂಡರು ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಇಲ್ಲಿಗೆ ಬಂದಿಳಿದೊಡನೆಯೇ ಕಾಂಗರೂ ನಾಡಿನ ವಾತಾ ವರಣಕ್ಕೆ ಹೊಂದಿಕೊಳ್ಳಲು ಮುಂದಾದ ಕ್ರೀಡಾಳುಗಳು ತಮ್ಮ ತರಬೇತಿ ಸೌಲಭ್ಯಗಳನ್ನು ವೀಕ್ಷಿಸಿಸಲು ತೆರಳಿದರು. ಚೆಫ್ ಡಿ ಮಿಷನ್ ವಿಕ್ರಮ್ ಸಿಂಗ್ ಸಿಸೋಡಿಯ, ತಂಡದ ಮ್ಯಾನೇಜರ್ ನಾಮದೇವ್, ಅಜಯ್ ನಾರಂಗ್ ಮತ್ತು ಶಿಯಾದ್ ಅವರು ಕ್ರೀಡಾಗ್ರಾಮದ ಐಒಎ ಕಚೇರಿಗೆ ತೆರಳಿದರು.
ಕ್ರೀಡಾ ಗ್ರಾಮದಲ್ಲಿ ಭಾರತೀಯ ಕ್ರೀಡಾಪಟುಗಳ ಉಸ್ತುವಾರಿ ನೋಡಿಕೊಳ್ಳಲು ಹಾಗೂ ಅವರ ಮೂಲಭೂತ ಸೌಕರ್ಯಗಳಿಗಾಗಿ ರೂಪಿಸಲಾದ ವ್ಯವಸ್ಥೆಗಳನ್ನು ಮೆಚ್ಚಿದ ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಸಿಸೋಡಿಯಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಮುಂದಿನ ಬುಧವಾರ ಆರಂಭಗೊಂಡು 15 ದಿನಗಳ ಕಾಲ ನಡೆಯಲಿದೆ.