ಕೋಲ್ಕತಾ:ಪಶ್ಚಿಮಬಂಗಾಳದ ಮೋಮಿನ್ ಪುರ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ನಡೆದ ಘರ್ಷಣೆ ತೀವ್ರ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದ್ದು, ಹಲವಾರು ವಾಹನಗಳನ್ನು ಧ್ವಂಸಗೊಳಿಸಿ, ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ದಾವಣಗೆರೆ: ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು 70ವರ್ಷದ ಪತ್ನಿಯನ್ನೇ ಕತ್ತು ಸೀಳಿ ಕೊಲೆಗೈದ ಪತಿ
ಮೋಮಿನ್ ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಳವೀಯಾ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬ್ಯಾನರ್ಜಿ ಆಡಳಿತದಲ್ಲಿ ಕೋಮುಗಲಭೆ ಸಾಮಾನ್ಯ ಎಂಬಂತಾಗಿದೆ ಎಂದು ಆರೋಪಿಸಿದ್ದಾರೆ.
ಇತಿಹಾಸದಿಂದ ಪಾಠ ಕಲಿಯದೇ ಅದನ್ನು ಪುನರಾವರ್ತಿಸುವವರು ನಾಶ ಹೊಂದಲಿದ್ದಾರೆ ಎಂದ ಅಮಿತ್ ನೋಖಾಲಿ ಗಲಭೆಯ ಉದಾಹರಣೆ ನೀಡಿದ್ದಾರೆ. ಭಾನುವಾರ ರಾತ್ರಿ ಇಕ್ಬಾಲ್ ಪುರ್ ಪೊಲೀಸ್ ಠಾಣೆ ಸುತ್ತಮುತ್ತ ಭಾರೀ ಸಂಖ್ಯೆಯ ಜನರು ಗುಂಪುಗೂಡಿದ್ದು, ಘರ್ಷಣೆ ಬಳಿಕ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಹಿಂಸಾಚಾರದ ನಂತರ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಿದರೂ ಕೂಡಾ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಟ್ವೀಟರ್ ನಲ್ಲಿ ಆರೋಪಿಸಿದ್ದಾರೆ.