Advertisement
ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಂದ್ ರಾಜ್ಯಾದ್ಯಂತ ಬಹುತೇಕ ಶಾಂತಿಯುತವಾಗಿತ್ತು. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಗದಗ, ಹಾವೇರಿಯಲ್ಲಿ ಬಂದ್ ಯಶಸ್ವಿಯಾಗಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜಾಪುರ, ಬೀದರ್, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳದಲ್ಲಿ ಬಂದ್ ನೀರಸವಾಗಿತ್ತು. ಬಂದ್ ಸಂದರ್ಭದಲ್ಲೇ ಮೈಸೂರಿನಲ್ಲಿ ನಡೆದ ಪರಿವರ್ತನ ಯಾತ್ರೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರ್ಜರಿ ಭಾಷಣ ಮಾಡಿ ಹೋಗಿದ್ದಾರೆ. ಆದರೆ, ಮಹಾದಾಯಿ ಬಗ್ಗೆ ಚಕಾರ ಎತ್ತಲಿಲ್ಲ.
ಕನ್ನಡಪರ ಸಂಘಟನೆಗಳು ರೈಲು ಹಾಗೂ ರಸ್ತೆ ತಡೆ, ಧರಣಿ ಮೂಲಕ ತಮ್ಮ ಆಕ್ರೋಶ ಹೊರ ಹಾಕಿವೆ. ಸಾವಿರಾರು ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿ ಮಹಾದಾಯಿ ವಿಚಾರದಲ್ಲಿ ತತ್‌ಕ್ಷಣ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಚಲನಚಿತ್ರ ಪ್ರದರ್ಶನ, ಚಿತ್ರೀಕರಣ ಸಹಿತ ಇಡೀ ಚಿತ್ರೋದ್ಯಮ ಸ್ಥಗಿತ ಗೊಂಡಿತ್ತು. ಮುನ್ನೆಚ್ಚರಿಕೆಯಾಗಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಕೆಲವೆಡೆ ಜನಜೀವನ ಅಸ್ತವ್ಯಸ್ತ ಗೊಂಡಿತ್ತು¤. ಸಂಜೆ ಸಂಚಾರ ಪುನರಾರಂಭಗೊಂಡು ಎಲ್ಲೆಡೆ ಜನಜೀವನ ಸಹಜ ಸ್ಥಿತಿಗೆ ಮರಳಿತು.