Advertisement
ಉದ್ದುದ್ದ ಕಾಲು, ಕುತ್ತಿಗೆ, ಕೊಕ್ಕು, ಬೂದು ಬಣ್ಣದ ಕಾಲು ಇದಕ್ಕಿದೆ. ದೂರದಿಂದ ನೋಡಿದರೆ ಕೊಕ್ಕರೆಯಂತೆ ಕಾಣುತ್ತದೆ. ಆದರೆ, ಬಿಳಿ ಛಾಯೆಯ ಕಂದುಬಣ್ಣ, ಕಣ್ಣಿನ ಹಿಂಭಾಗದಿಂದ ಆರಂಭವಾಗಿ ಕುತ್ತಿಗೆಯ ಬುಡದ ತನಕ ಬಿಳಿ ಪಟ್ಟಿ ಇರುತ್ತದೆ. ನೆತ್ತಿ, ಕೆಂಪು ಬಣ್ಣದಿಂದ ಕೂಡಿರುತ್ತದೆ. ಇದರಿಂದಾಗಿ ಕೊಕ್ಕರೆಗಳಿಗಿಂತ ಇದು ಭಿನ್ನ ಎಂದು ಸುಲಭವಾಗಿ ಗುರುತಿಸಬಹುದು.
ಪ್ರೌಢಾವಸ್ಥೆಗೆ ಬಂದ ಮರಿಗಳು ಕೆಂಪು ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತವೆ. ಮರಿಗಳು ದೊಡ್ಡದಾದ ಮೇಲೆ ವಲಸೆ ಹೋಗುತ್ತವೆ. ಅದಕ್ಕೂ ಮುನ್ನ ದೇಹದ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುತ್ತವೆ. ಪ್ರತಿ ದಿನ ಎಷ್ಟು ದೂರ ಪ್ರಯಾಣಿಸುತ್ತವೆ, ಮಧ್ಯ ನಿಲ್ಲದೇ ಒಂದೇರೀತಿ ಹಾರುತ್ತದೆಯೋ- ಈ ವಿಚಾರವಾಗಿ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಇವು ವಲಸೆ ಬರುವಾಗ ಜೊತೆಯಲ್ಲಿ ಇತರ ಪಕ್ಷಿಗಳ ಜೊತೆ ಬರುವವೋ? ಇಲ್ಲವೇ ಪ್ರತ್ಯೇಕವಾಗಿ ಬರುವವೋ? ಎಂಬ ವಿಷಯದಲ್ಲೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಈ ಪಕ್ಷಿ ಏರು ಸ್ವರದಲ್ಲಿ ಕ್ರೋಕ್, ಕ್ರೋಕ್ ಎಂದು ಮರಿಮಾಡುವ ಸಮಯದಲ್ಲಿ ಕೂಗುತ್ತದೆ. ಸಾಮಾನ್ಯವಾಗಿ ಕ್ರೌಂಚ ಪಕ್ಷಿಯ ಜೊಡಿಯನ್ನು ಹೊಳೆ ದಂಡೆಯಲ್ಲಿ ಕಾಣಬಹುದು. ಮುಂಜಾನೆ ಮತ್ತು ಸಾಯಂಕಾಲ ಹಾರಿಕೊಂಡೇ ಇದ್ದು, ಬೇಸಾಯ ಮಾಡಿದ ಹೊಲಗಳಲ್ಲಿ ಆಹಾರ ಸಂಗ್ರಹಿಸಲು ಹೋಗುತ್ತದೆ. ಮರಿ ಮಾಡುವಾಗಲೂ ಸಸ್ಯಗಳ ಗುಚ್ಚ ಇರುವಲ್ಲಿ ಅದರ ನಡುವೆ ಹುಲ್ಲು ಸೇರಿಸಿ ತೇಲು ಗೂಡು ನಿರ್ಮಿಸುತ್ತದೆ. ಅದರಲ್ಲಿ ತಿಳಿ ಕಂದು ಬಣ್ಣದ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಇದರ ತಿಳಿ ಕಂದು ಬಣ್ಣದ ಮೊಟ್ಟೆಯ ಮೇಲೆ , ದಟ್ಟಕಂದು ಬಣ್ಣದ ಚುಕ್ಕೆ ಮತ್ತು ಮಚ್ಚೆ ಇರುತ್ತದೆ. ಹೊಳೆ ದಂಡೆಯಲ್ಲಿರುವ ಹೊಲಗಳಲ್ಲಿ ಕಲ್ಲಂಗಡಿ ಸಸ್ಯ ಬೆಳೆದಾಗ ಅದರದಂಟು , ಚಿಗುರುಗಳನ್ನು ತಿಂದು ರೈತರ ಕೆಂಗಣ್ಣಿಗೆ ಇವು ಗುರಿಯಾಗುವುದೂ ಉಂಟು. ಆದರೂ ಕಲ್ಲಂಗಡಿಗೆ ಬೀಳು ಹುಳುಗಳ ನಿಯಂತ್ರಣದಲ್ಲಿ ಇವುಗಳ ಪಾತ್ರ ಕಡಿಮೆ ಏನಿಲ್ಲ.
Related Articles
Advertisement
ಪಿ. ವಿ. ಭಟ್ ಮೂರೂರು