ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸಮಿತಿ ನೀಡಿದ್ದ ತನಿಖಾ ವರದಿಯ ಆಧಾರದ ಮೇಲೆ 31 ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ
“ಉದಯವಾಣಿ’ ಜತೆ ಮಾತನಾಡಿದ ಅವರು, ಈಗಾಗಲೇ 25 ಎಂಜಿನಿಯರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ, ನಗರಾಭಿವೃದ್ಧಿ ಇಲಾಖೆ ವಶಕ್ಕೆ ನೀಡಲಾಗಿದೆ. ಅದೇ ರೀತಿ ವರದಿಯಲ್ಲಿ ಉಲ್ಲೇಖೀಸಿರುವ ಗುತ್ತಿಗೆದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯ ಗಾಂಧೀನಗರ, ಮಲ್ಲೇಶ್ವರ, ರಾಜರಾಜೇಶ್ವರಿ ನಗರಗಳಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2011ರಲ್ಲಿ ಬಿಬಿಎಂಪಿಯ ಆಯುಕ್ತರಾಗಿದ್ದ (ಆಡಳಿತ) ಬಿ.ಎಫ್. ಪಾಟೀಲ್ ಅವರು, ಟಿವಿಸಿಸಿ ತನಿಖೆಗೆ ಆದೇಶ ಮಾಡಿದ್ದರು. ಈ ವೇಳೆ ಹಲವಾರು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಕಾಮಗಾರಿ ನಿರ್ವಹಣೆಯಲ್ಲಿ ನಕಲಿ ಸಂಖ್ಯೆ ಸೃಷ್ಟಿಸಿ, ಅಪಾರ ಪ್ರಮಾಣದ ಬಿಲ್‌ಗಳ ಅನುಮೋದನೆ ಪಡೆದುಕೊಂಡಿರುವುದು. ಅಲ್ಲದೆ, ಕೆಟಿಪಿಪಿ ಕಾಯ್ದೆ ಮತ್ತು ಪಿಡಬ್ಲೂಡಿ ಕೋಡ್‌ಗೆ ವ್ಯತಿರಿಕ್ತವಾಗಿ ಕಾಮಗಾರಿ ನಡೆಸಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ನಷ್ಟ ವಸೂಲಿ ಸಮಿತಿ ರಚನೆ: ಬಿಬಿಎಂಪಿಗೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡುವ ಉದ್ದೇಶದಿಂದ ಬಿಬಿಎಂಪಿಯ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗುತ್ತಿದೆ. ಬಿಬಿಎಂಪಿಗೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಿಬಿಎಂಪಿ ಅಧಿಕಾರಿಗಳ ಸಮಿತಿ ರಚನೆಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯಲ್ಲಿ ಒಟ್ಟು 67 ಕಾಮಗಾರಿಗಳಲ್ಲಿ 33 ಎಂಜಿನಿಯರ್ ಹಾಗೂ 31 ಗುತ್ತಿಗೆದಾರರ ವಿರುದ್ಧ 43 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಈ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರದಿಂದ ಬಿಬಿಎಂಪಿಗೆ ಅಂದಾಜು 76 ಕೋಟಿ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಉದ್ದೇಶಿತ ಸಮಿತಿ ಎಷ್ಟರ ಮಟ್ಟಿಗೆ ಅಪರಾಧಿಗಳಿಂದ ಹಣ ವಸೂಲಿ ಮಾಡಲಿದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
2014ರಲ್ಲಿ ಪತ್ರ ಬರೆದರೆ, 2019ರಲ್ಲಿ ಕ್ರಮ!: ಬಿಬಿಎಂಪಿಯ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 2014ರಲ್ಲೇ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಿಐಡಿ ಅಧಿಕಾರಿಗಳು ಪತ್ರ ಬರೆದರೂ, ಬಿಬಿಎಂಪಿ ಆಯುಕ್ತರು ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆ ಹಲವು ಬಾರಿ ಆಕ್ಷೇಪಣೆಗಳು ವ್ಯಕ್ತವಾಗಿತ್ತು. ಈ ಸಂಬಂಧ ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್.ಗೋಪಾಲಯ್ಯ ಅವರು, ಬಿಬಿಎಂಪಿಗೆ ಮತ್ತೂಂದು ಪತ್ರ ಬರೆದಿದ್ದು, ವಿವರಣೆ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶ ಮಾಡಿದ್ದಾರೆ.
ನಾಗಮೋಹನ್ ದಾಸ್ ಸಮಿತಿಯೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಬಿಬಿಎಂಪಿ ಆಯುಕ್ತರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆರೋಪ ಸಾಬೀತಾದರೂ ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಆಯುಕ್ತರಾಗಿದ್ದವರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಲೇ ಬರುತ್ತಿದ್ದರು. ಇದು ಅಧಿಕಾರಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೂ ಕಾರಣವಾಗಿತ್ತು.
ಸಿಐಡಿ ವರದಿಯಲ್ಲಿರುವ ಗುತ್ತಿಗೆದಾರರ ಹೆಸರು: ಎಚ್.ಮಂಜುನಾಥ್, ಜೆ.ಎಚ್.ರುದ್ರಪ್ಪ, ಬಿ.ಎಂ.ಆನಂದ್, ಕೆ.ಎಸ್.ಭರತ್, ಎಂ.ನಾಗೇಶ್, ಎಂ.ಕೃಷ್ಣ ಮೂರ್ತಿ, ಎಂ.ನಾಗೇಶ್, ಎನ್.ಸಿ.ನಾಗರಾಜು, ಜೆ.ಎಸ್.ಶಿವಸ್ವಾಮಿ, ಜಿ.ಕುಮಾರಸ್ವಾಮಿ, ಎಂ.ಮಂಜುನಾಥ್, ಎಲ್.ಮಹೇಶ್, ಟಿ.ಜಿ.ಸುರೇಶ್, ಸಿ.ಸುಬ್ರಹ್ಮಣ್ಯ, ಆರ್.ಚಂದ್ರನಾಯ್ಕ, ಸಿ.ಕೃಷ್ಣಪ್ಪ, ಕೆ.ಜಗದೀಶ್, ಬಾಬುರಾವ್, ಟಿ.ಜಿ.ಸುರೇಶ್, ಎಂ.ಡಿ.ಶಿವಕುಮಾರ್, ಧನಂಜಯ್, ಜಿ.ಯಶೋಕುಮಾರ್, ಎಂ. ನವೀನ್, ಸಿ.ಪಿ.ಉಮೇಶ್, ಎಸ್.ಎಚ್.ಪರುಷೋತ್ತಮ್, ಎಂ.ಕೃಷ್ಣಮೂರ್ತಿ, ಸಿ.ಲಕ್ಷ್ಮೀನಾರಾಯಣ, ಸಿ.ಜಿ.ಚಂದ್ರಪ್ಪ ಗುತ್ತಿಗೆದಾರ ಹೆಸರನ್ನು ಕಪ್ಪುಪಟ್ಟಿಗೆ ಸೇರುವಂತೆ ಸಿಐಡಿ ಶಿಫಾರಸು ಮಾಡಿದೆ.