Advertisement

ಭಾರತ-ಚೀನಾ ಸಮನ್ವಯಕ್ಕೆ ಸಮಿತಿ

10:40 AM Oct 14, 2019 | Team Udayavani |

ಮಹಾಬಲಿಪುರಂ: ಭಾರತ ಮತ್ತು ಚೀನಾ ನಡುವಿನ ವಾಣಿಜ್ಯ, ಹೂಡಿಕೆ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಏರ್ಪಡುವ ವಿವಾದಗಳು, ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ಎರಡೂ ದೇಶಗಳ ಸಚಿವರ ಮಟ್ಟದಲ್ಲಿ ಸಮಿತಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಗೆ ಪ್ರಧಾನಿ ಮೋದಿ ಹಾಗೂ ಜಿನ್‌ಪಿಂಗ್‌ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶೃಂಗಸಭೆಯ ನಂತರ ಮಹಾಬಲಿಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ತಿಳಿಸಿದ್ದಾರೆ.

Advertisement

ಪ್ರಸ್ತಾವನೆಯಂತೆ, ಹೊಸ ಸಮಿತಿಯಲ್ಲಿರುವ ಚೀನಾ ಕಡೆಯ ಪ್ರತಿನಿಧಿಗಳ ನಿಯೋಗಕ್ಕೆ ಚೀನಾದ ಉಪ ಪ್ರಧಾನಿ ಹು ಚುನುØವಾ ಮುಖ್ಯಸ್ಥರು ಆಗಿರಲಿದ್ದಾರೆ. ಭಾರತದ ಪ್ರತಿನಿಧಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಖ್ಯಸ್ಥರಾಗಿರಲಿದ್ದಾರೆ ಎಂದು ವಿವರಿಸಿದರು.

ಶೃಂಗಸಭೆಯಲ್ಲಿ, ಭಾರತದ ಮಹತ್ವಾ ಕಾಂಕ್ಷೆಯ “ರೀಜನಲ್‌ ಕಾಂಪ್ರಹೆನ್ಸಿವ್‌ ಎಕನಾಮಿಕ್‌ ಪಾರ್ಟ್‌ನರ್‌ಶಿಪ್‌’ (ಆರ್‌ಸಿಇಪಿ) ಎಂಬ ಹೊಸ ಒಕ್ಕೂಟ ಸ್ಥಾಪನೆಯ ಬಗ್ಗೆ ಉಭಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ ಗೋಖಲೆ, ಆರ್‌ಸಿಪಿಯ ಎಲ್ಲಾ ಸದಸ್ಯರಿಗೆ ಅದರಿಂದ ಆಗಲಿರುವ ನೆರವು ಮತ್ತಿತರ ಅನುಕೂಲಗಳನ್ನು ಪ್ರಧಾನಿ ಮೋದಿಯವರು, ಜಿನ್‌ಪಿಂಗ್‌ ಅವರಿಗೆ ವಿವರಿಸಿ ತಿಳಿಸಿದ್ದಾರೆ. ಈಗಾಗಲೇ, ಆರ್‌ಸಿಇಪಿ ಸ್ಥಾಪನೆಗಾಗಿ ಶುರುವಾಗಿರುವ ಪ್ರಾಥಮಿಕ ಹಂತದ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಜಿನ್‌ಪಿಂಗ್‌ ಅವರನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ಜಿನ್‌ಪಿಂಗ್‌ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಗೋಖಲೆ ತಿಳಿಸಿದರು.

ಸೇನೆಗಳ ನಡುವೆ ವಿಶ್ವಾಸ: ಎರಡೂ ದೇಶಗಳ ರಕ್ಷಣೆಗೆ ಸಂಬಂಧಿಸಿದಂತೆ ಭಾರತ, ಚೀನಾ ನಡುವೆ ಉತ್ತಮ ಸಂವಹನ ಸ್ಥಾಪಿಸುವ ಹಾಗೂ ಎರಡೂ ದೇಶಗಳ ಸೇನೆಯ ನಡುವೆ ವಿಶ್ವಾಸಾರ್ಹ ವಾತಾವರಣ ನಿರ್ಮಿಸುವ ಬಗ್ಗೆಯೂ ಉಭಯ ನಾಯಕರು ನಿರ್ಧರಿಸಿದರು ಎಂದು ಗೋಖಲೆ ತಿಳಿಸಿದರು.

ನೇಪಾಳಕ್ಕೆ ತೆರಳಿದ ಜಿನ್‌ಪಿಂಗ್‌: ಎರಡು ದಿನಗಳ ಅನೌಪಚಾರಿಕ ಶೃಂಗಸಭೆಗೆ ಶನಿವಾರ ತೆರೆಬಿದ್ದದ್ದು, ಸಭೆಯ ನಂತರ, ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ ನೇಪಾಳಕ್ಕೆ ತೆರಳಿದರು. ಚೆನ್ನೈ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ಜಿನ್‌ಪಿಂಗ್‌ ಮತ್ತವರ ನಿಯೋಗವನ್ನು, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನೀರ್‌ಸೆಲ್ವಂ ಹಾಗೂ ತಮಿಳುನಾಡು ವಿಧಾನಸಭೆ ಸ್ಪೀಕರ್‌ ಪಿ. ಧನಪಾಲ್‌ ಅವರು ಬೀಳ್ಕೊಟ್ಟರು.

Advertisement

ಡೋಂಟ್‌ ಗೋಬ್ಯಾಕ್‌ ಮೋದಿ
ಟ್ವಿಟರ್‌ನಲ್ಲಿ ಶುಕ್ರವಾರ ಸಂಚಲನ ಸೃಷ್ಟಿಸಿದ್ದ “ಗೋ ಬ್ಯಾಕ್‌ ಮೋದಿ’ ಎಂಬ ಹ್ಯಾಶ್‌ಟ್ಯಾಗ್‌ ಅಭಿಯಾನಕ್ಕೆ ಪ್ರತಿಯಾಗಿ ಶನಿವಾರ, “ಡೋಂಟ್‌ ಗೋ ಬ್ಯಾಕ್‌ ಮೋದಿ’ ಎಂಬ ಮತ್ತೂಂದು ಅಭಿಯಾನ ಆರಂಭವಾಗಿ, ದಿನವಿಡೀ ಟ್ರೆಂಡಿಂಗ್‌ನಲ್ಲಿತ್ತು. ಪ್ರಧಾನಿ ಮೋದಿ ಮಹಾಬಲಿಪುರಂಗೆ ಆಗಮಿಸಿದ್ದನ್ನು ತಮಿಳುನಾಡಿನ ಜನತೆ ವಿರೋಧಿಸಿದ್ದಾರೆ ಎಂಬಂತೆ “ಗೋ ಬ್ಯಾಕ್‌ ಮೋದಿ’ ಅಭಿಯಾನವನ್ನು ಬಿಂಬಿಸಲಾಗಿತ್ತು. ಆದರೆ, ತನಿಖೆಯ ನಂತರ, ಅದು ಪಾಕಿಸ್ತಾನ ಬೆಂಬಲಿಗರ ಕೈವಾಡ ಎಂಬುದು ಬಹಿರಂಗವಾಯಿತು. ಇದು ಗೊತ್ತಾಗುತ್ತಲೇ, ಮೋದಿ ಅಭಿಮಾನಿಗಳು, ಶನಿವಾರ ಟ್ವಿಟರ್‌ನಲ್ಲಿ, ಡೋಂಟ್‌ ಗೋ ಬ್ಯಾಕ್‌ ಮೋದಿ ಅಭಿಯಾನ ಶುರು ಮಾಡಿದರು.

ಚೀನಾ ಅಧ್ಯಕ್ಷರಿಗೆ ರೇಷ್ಮೆ ಶಾಲು ಉಡುಗೊರೆ
ಶನಿವಾರ ಜಿನ್‌ಪಿಂಗ್‌ರವರಿಗೆ ಪ್ರಧಾನಿ ನರೇಂದ್ರ ಮೋದಿ, ಕೈಮಗ್ಗದಲ್ಲಿ ನೇಯ್ದಿರುವ ಕೆಂಪು ಬಣ್ಣದ ರೇಷ್ಮೆಯ ದೊಡ್ಡ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಾಲಿನ ಮಧ್ಯದಲ್ಲಿ ಚಿನ್ನದ ಝರಿಯಿಂದ ಜಿನ್‌ಪಿಂಗ್‌ರವರ ಮುಖಭಾವವನ್ನು ನೇಯಲಾಗಿದೆ. ಕೊಯಮತ್ತೂರು ಮೂಲದ ರೇಷ್ಮೆ ಕೈಮಗ್ಗ ಸಂಘಟನೆಯೊಂದು ಈ ವಿಶೇಷ ಶಾಲನ್ನು ತಯಾರಿಸಿದೆ.

ವಸ್ತು ಪ್ರದರ್ಶನಕ್ಕೆ ಭೇಟಿ: ಶಾಲು ಉಡುಗೊರೆಗೂ ಮುನ್ನ ಜಿನ್‌ಪಿಂಗ್‌ ಅವರನ್ನು, ಅವರು ತಂಗಿದ್ದ ಸಾಗರ ತೀರದ ತಾಜ್‌ ಫಿಶರ್‌ಮ್ಯಾನ್ಸ್‌ ರೆಸಾರ್ಟ್‌ ಬಳಿಯಲ್ಲೇ ಏರ್ಪಡಿಸಲಾಗಿದ್ದ ಕೈಮಗ್ಗ ತಯಾರಿಕೆಗಳ ವಸ್ತು ಪ್ರದರ್ಶ ನಕ್ಕೆ ಮೋದಿ ಕರೆದೊಯ್ದಿದ್ದರು. ಅಲ್ಲಿ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿರುವ ನಾನಾ ರೀತಿಯ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಒಂದೊಂದೇ ಕಲಾ ಮಾದರಿಯ ವಿಶೇಷತೆಯನ್ನು ಮೋದಿಯವರು, ಜಿನ್‌ಪಿಂಗ್‌ಗೆ ವಿವರಿಸಿದರು. ಇದೇ ವೇಳೆ, ಕೈಮಗ್ಗ ನೇಕಾರಿಕೆಯ ಪ್ರಾತ್ಯಕ್ಷಿಕೆಯನ್ನು ಇಬ್ಬರೂ ನಾಯಕರು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next