Advertisement

ಕ್ಲಬ್‌ಗಳ ಅಕ್ರಮ ತಡೆಗೆ ಸದನ ಸಮಿತಿ?

12:45 AM Mar 12, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿನ ರಿಕ್ರಿಯೇಷನ್‌ ಕ್ಲಬ್‌ಗಳಲ್ಲಿನ ಅಕ್ರಮಗಳ ಪತ್ತೆ ಮತ್ತು ಕ್ಲಬ್‌ಗಳ ಚಟುವಟಿಕೆ ಮೇಲೆ ಕಡಿವಾಣ ಹಾಕಲು ಮೇಲ್ಮನೆ ಸದಸ್ಯರನ್ನು ಒಳಗೊಂಡ ಸದನ ಸಮಿತಿ ರಚಿಸಲು ಸರ್ಕಾರ ಸಿದ್ಧವಿದೆ ಎಂದು ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

Advertisement

ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 316 ರಿಕ್ರಿಯೇಷನ್‌ ಕ್ಲಬ್‌ಗಳಿದ್ದು, ಅದರಲ್ಲಿ 39 ರಿಕ್ರಿಯೇಷನ್‌ ಕ್ಲಬ್‌ಗಳಿಗೆ ಸರ್ಕಾರದಿಂದ ನಿವೇಶನಗಳನ್ನು ಗುತ್ತಿಗೆ ಮತ್ತು ಬಾಡಿಗೆ ಆಧಾರದಲ್ಲಿ ನೀಡಲಾಗಿದೆ.

ಅವುಗಳಲ್ಲಿ ಬಹುತೇಕ ಕ್ಲಬ್‌ಗಳು ನಿಯಮ ಮೀರಿ ಚಟುವಟಿಕೆ ಮತ್ತು ನಿರ್ಮಾಣ ಮಾಡಿರುವ ದೂರುಗಳಿವೆ. ಹೀಗಾಗಿ ಸದನದ ಸದಸ್ಯರ ಕೋರಿಕೆಯಂತೆ ಕ್ಲಬ್‌ಗಳ ವಿರುದ್ಧ ಕ್ರಮಕ್ಕೆ ವಿಧಾನಪರಿಷತ್‌ ಸದಸ್ಯರ ಸದನ ಸಮಿತಿ ರಚಿಸಲು ಸಿದ್ಧರಿದ್ದೇವೆ. ಅದಕ್ಕೂ ಪೂರ್ವದಲ್ಲಿ ಎಲ್ಲ ಪಕ್ಷದ ಸದಸ್ಯರೊಂದಿಗೆ ಸದಸ್ಯರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿ, ರಿಕ್ರಿಯೇಷನ್‌ ಕ್ಲಬ್‌ ಎಂಬ ಹೆಸರಿಟ್ಟುಕೊಂಡು ಹಲವು ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಕ್ಲಬ್‌ನ ಜಾಗದಲ್ಲಿ ಅನುಮತಿಯಿಲ್ಲದಿದ್ದರೂ, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಕೂಡಲೆ ತೆರವು ಮಾಡಬೇಕು. ಜತೆಗೆ ಕೆಲವೊಂದು ಕ್ಲಬ್‌ಗಳಲ್ಲಿ ದೇಶಿ ಉಡುಪಿಗೂ ಮಾನ್ಯತೆ ನೀಡುವುದಿಲ್ಲ. ಜನಪ್ರತಿನಿಧಿ ಎಂಬುದನ್ನು ಗಮನಿಸದೇ ಪ್ರವೇಶ ನಿರಾಕರಿಸುತ್ತಾರೆ. ಈ ಬಗ್ಗೆಯೂ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ಪ್ರತ್ಯೇಕ ಕ್ಲಬ್‌: ಈ ಹಿಂದೆ ಶಾಸಕರಿಗಾಗಿ ಪ್ರತ್ಯೇಕ ರಿಕ್ರಿಯೇಷನ್‌ ಕ್ಲಬ್‌ ರಚಿಸುವ ಪ್ರಕ್ರಿಯೆ ನಡೆದಿತ್ತು. ಕೊನೆಗೆ ಅದನ್ನು ಸ್ಥಗಿತಗೊಳಿಸಲಾಗಿತ್ತು. ಪ್ರತಿಯೊಬ್ಬರಿಗೂ ಪ್ರತ್ಯೇಕ ಕ್ಲಬ್‌ಗಳಿವೆ. ಅದೇ ರೀತಿ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಕ್ಲಬ್‌ ರಚನೆಯಾಗಬೇಕು ಎಂದು ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದರು.

Advertisement

ಅದಕ್ಕೆ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರತಿಕ್ರಿಯಿಸಿ, ವಿಧಾನಸೌಧ ಸುತ್ತಲಿನ ಪ್ರದೇಶದಲ್ಲಿ ಎಲ್ಲಾದರು ಜಾಗವಿದ್ದರೆ ತಿಳಿಸಿ ಎಂದು ಸಲಹೆ ನೀಡಿದರು. ಆಗ ಕಾಂಗ್ರೆಸ್‌ನ ಆರ್‌.ಧರ್ಮಸೇನ, ರೇಸ್‌ಕೋರ್ಸ್‌ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2 ಎಕರೆ ಜಾಗವಿದೆ. ಈ ಹಿಂದೆ ಅಲ್ಲೇ ಕ್ಲಬ್‌ ನಿರ್ಮಿಸಬೇಕು ಎಂಬ ಪ್ರಸ್ತಾಪವಿತ್ತು. ಇದನ್ನೇ ಪರಿಶೀಲಿಸಬಹುದು ಎಂದು ಮನವಿ ಮಾಡಿದರು. ಅದಕ್ಕೆ ಸಚಿವ ಸೋಮ ಶೇಖರ್‌, ಲೋಕೋಪಯೋಗಿ ಇಲಾಖೆ ಜಾಗ ನೀಡಲು ಒಪ್ಪಿದರೆ, ಶಾಸಕರ ಕ್ಲಬ್‌ ನಿರ್ಮಿಸಲಾಗು ವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next