Advertisement

ಪಾರಂಪರಿಕ ಕಟ್ಟಡಗಳ ರಕ್ಷಿಸಲು ತಜ್ಞರ ಸಮಿತಿ

12:36 AM Feb 17, 2020 | Lakshmi GovindaRaj |

ಬೆಂಗಳೂರು: ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್‌.ಮಾರುಕಟ್ಟೆ), ಟಿಪ್ಪುಸುಲ್ತಾನ್‌ ಅರಮನೆ, ಕಲಾಸಿಪಾಳ್ಯದಲ್ಲಿರುವ ಹೈದರ್‌ಅಲಿ ಕಾಲದ ಶಸ್ತ್ರಾಸ್ತ್ರ ಕಾರ್ಯಾಗಾರ, ವಿಧಾನಸೌಧ, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳಿವೆ.

Advertisement

ಇದನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಹಾಗೂ ಕಟ್ಟಡಗಳ ಇತಿಹಾಸ ಮುಂದಿನ ಪೀಳಿಗೆಗೂ ತಿಳಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಡ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗಾಗಿ 50 ಕೋಟಿ ರೂ.ಅನುದಾನ ನೀಡುವಂತೆ ಸರ್ಕಾರಕ್ಕೆ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ.

ಮೂಲ ಸ್ವರೂಪ, ಮೈಸೂರು ಸಹಕಾರ: ಪಾರಂಪರಿಕ ಕಟ್ಟಡಗಳು ಅವುಗಳ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಯಥಾಸ್ಥಿತಿಯಲ್ಲಿ ಅಭಿವೃದ್ಧಿ ಆಗಲಿವೆ. ಅವುಗಳ ಇತಿಹಾಸ, ರಚನೆಯ ಹಿಂದಿನ ಉದ್ದೇಶವನ್ನೂ ಜನರಿಗೆ ತಿಳಿಸಲು ಪಾಲಿಕೆ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಚಿತ್ರಕಲಾ ತಜ್ಞರನ್ನು ಸಮಿತಿಗೆ ಸೇರಿಸಲಾಗಿದೆ. ಪಾರಂಪರಿಕ ಕಟ್ಟಡಗಳಲ್ಲಿ ಮೈಸೂರು ತನ್ನದೇ ಆದ ಖ್ಯಾತಿ ಗಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ತಜ್ಞರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.

ತಜ್ಞರು ಮತ್ತು ಅನುಭವ: ಪಾರಂಪರಿಕ ಕಟ್ಟಡಗಳ ರಕ್ಷಣೆ ಉದ್ದೇಶದಿಂದ ರಚನೆಯಾಗುತ್ತಿರುವ ಸಮಿತಿಯಲ್ಲಿ ಹಲವು ಇಲಾಖೆಗಳ ತಜ್ಞರು ಇರಲಿದ್ದಾರೆ. ಬಿಬಿಎಂಪಿ ಆಯುಕ್ತರೇ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಉಳಿದಂತೆ ಕನಿಷ್ಠ 10 ವರ್ಷ ಅನುಭವ ಹೊಂದಿರುವ ಮತ್ತು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಜಿನಿಯರಿಂಗ್‌ನ ಸದಸ್ಯರಾಗಿರುವ ಸ್ಟ್ರಕ್ಚರ್‌ ಎಂಜಿನಿಯರ್‌ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ, 10 ವರ್ಷ ಅನುಭವವಿರುವ ಹಾಗೂ ವಾಸ್ತುಶಿಲ್ಪಿ ಕೌನ್ಸಿಲ್‌ನ ಸದಸ್ಯತ್ವ ಪಡೆದಿರುವ ವಾಸ್ತುಶಿಲ್ಪ ತಜ್ಞರು ಸಹ ಸಮಿತಿಯ ಭಾಗವಾಗಿರುತ್ತಾರೆ.

ಯಾವುದಾದರು ಒಂದು ನಿರ್ದಿಷ್ಟ ವಿಷಯದಲ್ಲಿ ಪದವಿ ಪಡೆದಿರುವ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ಕನಿಷ್ಠ 10 ವರ್ಷಗಳ ಅನುಭವಿರುಬವ ಪರಿಸರ ತಜ್ಞ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅಕಾಡೆಮಿಯಲ್ಲಿ ಇತಿಹಾಸ ಅಥವಾ ಪುರಾತತ್ವ ವಿಷಯದಲ್ಲಿ ಡಾಕ್ಟರೇಟ್‌ ಪಡೆದ ಇತಿಹಾಸ, ಪುರಾತತ್ವ ತಜ್ಞರು ಸಮಿತಿ ಸದಸ್ಯರಾಗಬಹುದು. ಇವರೊಂದಿಗೆ ಪ್ರಾದೇಶಿಕತೆ ಕುರಿತು ಸಮರ್ಪಕ ಜ್ಞಾನವಿರುವವರು, ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವವರು, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರಜ್ಞ, ಅರಣ್ಯ ವಿಷಯ ದಲ್ಲಿ ಪಿಎಚ್‌.ಡಿ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ.

Advertisement

ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಪ್ರತಿನಿಧಿ, ಮೈಸೂರಿನ ಪುರಾತತ್ವ, ಮ್ಯೂಸಿಯಂ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಇಲಾಖೆಯ ಆಯುಕ್ತರು ಅಥವಾ ಅವರ ಪ್ರತಿನಿಧಿ, ಮೂರು ವರ್ಷಕ್ಕೂ ಹೆಚ್ಚು ಸಮಯದಿಂದ ನಗರದಲ್ಲಿ ಸಕ್ರಿಯವಾಗಿರುವ ಎರಡು ಸ್ವಯಂ ಸೇವಾ ಸಂಸ್ಥೆಗಳ ತಲಾ ಒಬ್ಬ ಸದಸ್ಯರು, ಮೈಸೂರಿನ ಭಾರತೀಯ ಪಾರಂಪರಿಕ ನಗರಗಳ ಸಂಪರ್ಕ ಸಂಸ್ಥೆ ಪ್ರತಿನಿಧಿ, ನಗರ ಯೋಜನೆ ನಿರ್ದೇಶಕರು ಅಥವಾ ಅವರ ಪ್ರತಿನಿಧಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಗರ ಯೋಜನೆ ತಜ್ಞ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಅಥವಾ ತಜ್ಞರು ಸಮಿತಿಯ ಸದಸ್ಯರಾಗಿರಲಿದ್ದಾರೆ.

ಪಾರಂಪರಿಕ ಮನೆಗಳ ಉಳಿವಿಗೂ ಆದ್ಯತೆ ನೀಡಿ: “ಚಾಮರಾಜಪೇಟೆ, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ನಗರದ ಹಲವು ಹಳೆಯ ಪ್ರದೇಶಗಳಲ್ಲಿ ಶತಮಾನಗಳ ಹಿಂದೆ ನಿರ್ಮಾಣ ಮಾಡಿರುವ ಪಾರಂಪರಿಕ ವಸತಿ ಕಟ್ಟಡಗಳಿದ್ದು, ಅವುಗಳ ಉಳಿವಿಗೂ ಪಾಲಿಕೆ ಸ್ಪಂದಿಸಬೇಕು’ ಎನ್ನುತ್ತಾರೆ ಬೆಂಗಳೂರು ಇತಿಹಾಸ ಅಂಕಣಕಾರರಾದ ಸುರೇಶ್‌ ಮೂನ. “ನಗರದ ಹಲವು ಪಾರಂಪರಿಕ ಕಟ್ಟಡಗಳನ್ನು ಗುರುತಿಸುವ ಕೆಲಸವಾಗಿಲ್ಲ. ಗುರುತಿಸಿರುವ ಕಟ್ಟಡದ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ನಮ್ಮ ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿದರೆ ನಮ್ಮ ನಗರದ ಬಗ್ಗೆ ಹೆಮ್ಮೆ ಮೂಡಲಿದೆ’ ಎಂದು ಅಭಿಪ್ರಾಯಪಟ್ಟರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸಮಿತಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಹ ಇದು ಸಹಕಾರಿಯಾಗಲಿದೆ.
-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next