Advertisement

ವಿಜಯಪುರ ನಗರ ಸಮಗ್ರ ಅಭಿವೃದ್ಧಿಗೆ ಸಮಿತಿ ಸೂಚನೆ

01:15 PM Jan 22, 2020 | Suhan S |

ವಿಜಯಪುರ: ಐತಿಹಾಸಿಕ ಹಿನ್ನಲೆಯ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಸ್ಮಾರಕಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆಯ ಕ್ರಿಯಾಯೋಜನೆ ರೂಪಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ವಿಧಾನ ಪರಿಷತ್‌ ಸರ್ಕಾರಿ ಭರವಸೆಗಳ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ.

Advertisement

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2010ರಲ್ಲಿ ವಿಧಾನ ಪರಿಷತ್‌ನ ಚುಕ್ಕೆಗುರುತಿನ ಪ್ರಶ್ನೆ 335 ಹಾಗೂ 524ರನ್ವಯ ಪ್ರವಾಸಿ ಅಭಿವೃದ್ಧಿ ಕಾಮಗಾರಿ ಕುರಿತಂತೆ ಅಂದಿನ ಪ್ರವಾಸೋಧ್ಯಮ ಸಚಿವರು ನೀಡಿರುವ ಭರವಸೆ ಪ್ರಸಕ್ತ ವರ್ಷಗಳವರೆಗೆ ಈಡೆರಿಸ ಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ಕೆ.ಸಿ. ಕೊಂಡಯ್ಯ ಅಧ್ಯಕ್ಷತೆಯ ವಿಧಾನ ಪರಿಷತ್, ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿತು.

ಸರ್ಕಾರಿ ಭರವಸೆಗಳ ಸಮಿತಿಯ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದು, ವಿಧಾನ ಪರಿಷತ್‌ನಲ್ಲಿ ಸದಸ್ಯರು ಎತ್ತಿದ ಪ್ರಶ್ನೆಗೆ ಅಂದಿನ ಸಚಿವರು ನೀಡಿರುವ ಭರವಸೆಯಂತೆ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಲಾಗಿದೆ. ವಿಜಯಪುರ ನಗರದಲ್ಲಿ ಕೋಟೆ ಅಭಿವೃದ್ಧಿ, ಐತಿಹಾಸಿಕ ಸ್ಮಾರಕಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ, ಐತಿಹಾಸಿಕ ಭೂಗತ ಜಲಮಾರ್ಗ ಕರೇಜ್‌ ವ್ಯವಸ್ಥೆ ಸುಧಾರಣೆ, ಪ್ರವಾಸಿಗರಿಗೆ ವಸತಿ ಸೌಲಭ್ಯ, 5ನೇ ಶತಮಾನದ ಬಸದಿಗಳ ನಿರ್ವಹಣೆ, ಬೂತನಾಳ ಕೆರೆ ಮತ್ತು ಬೇಗಂ ತಾಲಾಬ್‌ ಕೆರೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿತು.

ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರವಾಸೋದ್ಯಮಕ್ಕೆ ಪ್ರಶಸ್ತವಾಗಿರುವ ರಾಜ್ಯದ ವಿಜಯಪುರ, ಕಲಬುರಗಿ, ಬೀದರ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ಎಲ್ಲ ಐತಿಹಾಸಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸ್ಮಾರಕಗಳ ಸಂರಕ್ಷಣೆ ತುರ್ತಾಗಿ ಆಗಬೇಕಿದೆ. ಅಲ್ಲದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಈ ಜಿಲ್ಲೆಗಳಲ್ಲಿ ಮೂಲ ಸೌಕರ್ಯ, ಸುಧಾರಣೆ ಮತ್ತು ನಿರ್ವಹಣೆ ಕುರಿತಂತೆ ಜಿಲ್ಲಾವಾರು ನೀಲ ನಕ್ಷೆ ಸಹಿತ ಸಮಗ್ರ ಯೋಜನೆ ಸಿದ್ಧಪಡಿಸುಂತೆ ಸಮಿತಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿತು.

ಇದೇ ಸಂದರ್ಭದಲ್ಲಿ ವಿಜಯಪುರ ನಗರದ ಹೊರ ವಲಯದಲ್ಲಿರುವ ಬೂತನಾಳ ಕೆರೆಯ ಜಲಾಭಿಮುಖ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕಲ್ಪಿಸಲಾಗಿರುವ ವಿವಿಧ ಮೂಲ ಸೌಕರ್ಯ, ಕೆರೆ ಪರಿಸರದಲ್ಲಿ 44 ಸಾವಿರ ಸಸಿ ನೆಟ್ಟು ಬೆಳೆಸಲು ಕ್ರಮ ಕೈಗೊಂಡಿರುವುದು, ಕೃಷ್ಣಾ ಭಾಗ್ಯ ಜಲ ನಿಗಮದಿಂದ 11.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಬೇಗಂ ತಲಾಬ್‌ ಕೆರೆ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಕ್ಕೆ ಜಿಲ್ಲಾ ಧಿಕಾರಿ ವೈ. ಎಸ್‌. ಪಾಟೀಲ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಧಾನ ಪರಿಷತ್‌ ಸರ್ಕಾರಿ ಭರವಸೆಗಳ ಸಮಿತಿ ಅಭಿನಂದಿಸಿತು.

Advertisement

ಮುಂಬರುವ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವ್ಯಾಪ್ತಿಯಲ್ಲಿ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಪ್ರವಾಸೊಧ್ಯಮ ತಾಣಗಳ ಅಭಿವೃದ್ಧಿಗೆ ಶ್ರಮಿಸಬೇಕು. ನಗರದಲ್ಲಿರುವ ಜಲ ಸುರಂಗಮಾರ್ಗದ ಜೀರ್ಣೋದ್ಧಾರಕ್ಕೆ ಕ್ರೆ ಕೈಗೊಂಡು, ವಿಶ್ವ ದರ್ಜೆಯ ಈ ತಾಣಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯ ಅರುಣ ಶಹಾಪೂರ ಸೂಚಿಸಿದರು.

ಜಿಲ್ಲೆಯಲ್ಲಿರುವ 5ನೇ ಶತಮಾನದ 15 ಬಸದಿಗಳ ಜೀರ್ಣೋದ್ಧಾರ ಹಾಗೂ ನಿರ್ವಹಣೆ ಸೇರಿದಂತೆ ವಿವಿಧ ಸ್ಮಾರಕಗಳ ವ್ಯಾಪ್ತಿಯಲ್ಲಿಯೂ ಮೂಲ ಸೌಕರ್ಯ ಕಲ್ಪಿಸಬೇಕು. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ವಸತಿ ಸೌಲಭ್ಯಕ್ಕೆ ಯಾತ್ರಿ ನಿವಾಸಗಳನ್ನು ನಿರ್ಮಿಸಿ, ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರ ತಂಡ ಐತಿಹಾಸಿಕ ಗೋಲಗುಮ್ಮಟ, ಬೂತನಾಳ ಕೆರೆ ಪ್ರದೇಶಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿತು. ವಿಧಾನ ಪರಿಷತ್‌ ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರಾದ ಬಸವಾರಜ ಹೊರಟ್ಟಿ, ತೇಜಸ್ವಿನಿಗೌಡ, ಕೆ.ಟಿ. ಶ್ರೀಕಂಠೆಗೌಡ, ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಹಾಗೂ ಸಚಿವಾಲಯದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next