ಹೊಸದಿಲ್ಲಿ: ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ನಲ್ಲಿ ಸುಧಾರಣೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ಸುಧಾರಣೆಗಾಗಿ ಉನ್ನತಮಟ್ಟದ ಸಮಿತಿ ರಚನೆ ಯಾಗುವ ಸಾಧ್ಯತೆಯಿದೆ. ನೀಟ್ ವಿಚಾರದಲ್ಲಿ ಕೂಡ ಕೆಲವೊಂದು ಸುಧಾರಣೆಗಳನ್ನು ತರಲು ಕೇಂದ್ರ ಮುಂದಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ, ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ತೆಲಂಗಾಣದ ರಾಜ್ಯದಲ್ಲಿ ವಿವಿಧೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ದೇಶಾದ್ಯಂತ ಈ ವಿಚಾರವಾಗಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೌನವೇಕೆ?: ರಾಹುಲ್ ಗಾಂಧಿ ಪ್ರಶ್ನೆ
ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ನೀಟ್ ಅಕ್ರಮ ವರದಿಯಾಗುತ್ತಿದ್ದು, ಈ ರಾಜ್ಯಗಳು ಪತ್ರಿಕೆ ಸೋರಿಕೆ ಯ ಕೇಂದ್ರಗಳಾಗಿವೆ ಎಂದು ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಟ್ವೀಟ್ ಮಾಡಿ, “ಬಿಹಾರ, ಗುಜರಾತ್, ಹರಿಯಾಣದಲ್ಲಿ ನಡೆದ ಬಂಧನಗಳು ನೀಟ್‌ನಲ್ಲಿ ಸಂಘಟಿತ ಅಕ್ರಮ ನಡೆದಿದೆ ಎಂದು ಸ್ಪಷ್ಟಪಡಿಸುತ್ತವೆ. 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದ್ದರೂ ಮೋದಿ ಮೌನವಾಗಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ನಾವು ಪ್ರಸ್ತಾವಿಸಿ ಕಠಿನ ಕಾನೂನು ರೂಪಿಸುತ್ತೇವೆ’ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ 30 ಲಕ್ಷ ಆಮಿಷ: ಪೊಲೀಸರು
ಪಟ್ನಾ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ನೀಡಿದರೆ ಪ್ರಶ್ನೆ ಪತ್ರಿಕೆ ನೀಡುವ ಆಫರ್ ನೀಡಲಾಗಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳು ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದು ಒಬ್ಬ ವಿದ್ಯಾರ್ಥಿ ಈ ಬಗ್ಗೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಆಯುಷ್ ರಾಜ್, ಅಭಿಷೇಕ್ ಕುಮಾರ್ ಹಾಗೂ ಶಿವನಂದನ್ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಪಡೆದುಕೊಂಡಿದ್ದರು ಎಂದು ವರದಿಯಾಗಿದೆ.