Advertisement

Agri: ರೈತರಿಗೆ ನಿತ್ಯ 5 ತಾಸು ವಿದ್ಯುತ್‌ ಪೂರೈಸಲು ಬದ್ಧ- ಸಚಿವ ಕೆ.ಜೆ.ಜಾರ್ಜ್‌

09:57 PM Oct 16, 2023 | Team Udayavani |

ಬೆಂಗಳೂರು: “ರಾಜ್ಯದ ರೈತರಿಗೆ ದಿನಕ್ಕೆ ನಿರಂತರ ಐದು ತಾಸು ತ್ರಿಫೇಸ್‌ ವಿದ್ಯುತ್‌ ಪೂರೈಸುವಷ್ಟು ವಿದ್ಯುತ್‌ ಲಭ್ಯವಿದೆ. ಅದನ್ನು ನಿಯಮಿತವಾಗಿ ನೀಡಲು ಸರ್ಕಾರ ಬದ್ಧವಿದ್ದು, ಏಳು ತಾಸು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದರು.

Advertisement

ರೈತರು ತಮಗೆ ಐದು ತಾಸು ವಿದ್ಯುತ್‌ ನೀಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ. ಅದಕ್ಕೆ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದಕ್ಕೆ ಬೇಕಾಗುವಷ್ಟು ವಿದ್ಯುತ್‌ ನಮ್ಮ ಬಳಿ ಲಭ್ಯವಿದ್ದು, ತಪ್ಪದೆ ಸೂಚನೆಯನ್ನು ಪಾಲಿಸಲಾಗುವುದು. ಪಾಳಿಯಲ್ಲಿ ಅದನ್ನು ಪೂರೈಸಲು ಸಿದ್ಧತೆ ನಡೆದಿದ್ದು, ಹಗಲು ಎರಡು ಹೊತ್ತು ಮತ್ತೂಂದು ರಾತ್ರಿ ವೇಳೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾವು ಈ ಮೊದಲು ರೈತರಿಗೆ ಏಳು ತಾಸು ನಿರಂತರ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿದ್ದೆವು. ಆದರೆ, ಈಗಿನ ಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಸಚಿವರು, ರಾತ್ರಿಪಾಳಿಯಲ್ಲಿ ಐದು ಗಂಟೆ ವಿದ್ಯುತ್‌ ಪಡೆಯುವ ರೈತರಿಗೆ ಮುಂದಿನ ಮೂರು ವಾರಗಳ ನಂತರ ಹಗಲಿನಲ್ಲಿ ಪೂರೈಕೆ ಆಗಲಿದೆ. ಅದೇ ರೀತಿ, ಹಗಲಿನಲ್ಲಿ ಪಡೆಯುತ್ತಿರುವವರಿಗೆ ರಾತ್ರಿ ಸಿಗಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ತಿಳಿಸಿರುವಂತೆ ಬೇಡಿಕೆ ಮತ್ತು ಪೂರೈಕೆಗೆ ಹೋಲಿಸಿದರೆ, ಪ್ರಸ್ತುತ 1,500 ಮೆ.ವಾ. ಕೊರತೆಯಾಗುತ್ತಿದೆ. ಅದನ್ನು ನೀಗಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ವಿದ್ಯುತ್‌ ಕಾಯ್ದೆಯ ಕಲಂ 11 ಜಾರಿಗೊಳಿಸಲಾಗುತ್ತಿದ್ದು, ಇದರಿಂದಲೇ 1,500 ಮೆ.ವಾ. ಲಭ್ಯವಾಗಲಿದೆ. ಉಳಿದಂತೆ ವಿಜಯಪುರದ ಕೂಡಿಗಿಯಿಂದ 150-200 ಮೆ.ವಾ. ಸಿಗಲಿದೆ. ಕೇಂದ್ರ ಇಂಧನ ಸಚಿವರ ಜತೆಗೂ ಮಾತುಕತೆ ನಡೆಸಿದ್ದು, ನೆರವಿನ ಭರವಸೆ ನೀಡಿದ್ದಾರೆ. ಹಾಗಾಗಿ, ರಾಜ್ಯದ ವಿದ್ಯುತ್‌ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೆಲವೇ ದಿನಗಳಲ್ಲಿ ಸುಧಾರಣೆಯೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೊಳೆದ ಕಲ್ಲಿದ್ದಲು ಆಮದಿಗೂ ಚಿಂತನೆ: “ಈ ಮಧ್ಯೆ ವಿವಿಧ ಶಾಖೋತ್ಪನ್ನ ಕೇಂದ್ರಗಳಿಗೆ ವಿದೇಶಿ ಕಲ್ಲಿದ್ದಲು ಪೂರೈಕೆಗೂ ಟೆಂಡರ್‌ ಆಹ್ವಾನಿಸಲಾಗಿದೆ. ಅದನ್ನು ದೇಶೀಯ ಕಲ್ಲಿದ್ದಲಿನೊಂದಿಗೆ ಶೇ. 10ರಷ್ಟು ಮಿಶ್ರಣ ಮಾಡುವುದರಿಂದ ಉತ್ಪಾದನೆ ಪ್ರಮಾಣ ಹೆಚ್ಚಲಿದೆ. ಜತೆಗೆ ತೊಳೆದ ಕಲ್ಲಿದ್ದಲು ಆಮದಿಗೂ ಚಿಂತನೆ ನಡೆದಿದೆ. ಇವೆರಡರಿಂದ ಹಾರುವಬೂದಿ ಪ್ರಮಾಣ ಕಡಿಮೆಯಾಗುವುದಲ್ಲದೆ, ಗುಣಮಟ್ಟ ಸುಧಾರಣೆ ಆಗಲಿದೆ. ದುಬಾರಿ ಆಗುವುದರ ಬಗ್ಗೆ ನಾವು ಚಿಂತನೆ ಮಾಡುವುದಕ್ಕಿಂತ ಹೆಚ್ಚಾಗಿ, ಲಭ್ಯವಿರುವ ಸಾಮರ್ಥ್ಯದಲ್ಲಿ ಅಧಿಕ ಉತ್ಪಾದನೆ ಹೇಗೆ ಮಾಡಬೇಕು ಎಂಬುದರ ಕಡೆಗೆ ನಮ್ಮ ಆಲೋಚನೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

Advertisement

ಇನ್ನು ಮತ್ತೂಂದೆಡೆ ದೀರ್ಘಾವಧಿ ಪರಿಹಾರವಾಗಿ ಕೇಂದ್ರದ ಕುಸುಮ್‌ (ಕಿಸಾನ್‌ ಊರ್ಜಾ ಸುರಕ್ಷಾ ಮತ್ತು ಉತ್ಥಾನ್‌ ಮಹಾ ಅಭಿಯಾನ) ಅಡಿ ರೈತರ ಜಮೀನಿನಲ್ಲೇ ವಿದ್ಯುತ್‌ ಉತ್ಪಾದನೆ ಮಾಡಿ ಪೂರೈಸಲು ಸಿದ್ಧತೆ ನಡೆದಿದೆ. ರೈತರ ಜಮೀನನ್ನು ಗುತ್ತಿಗೆ ಪಡೆದು, ಅಲ್ಲಿ ಸೌರ ವಿದ್ಯುತ್‌ ಘಟಕಗಳನ್ನು ನಿರ್ಮಿಸಲಾಗುವುದು. ಅದರಿಂದ ಬಂದ ವಿದ್ಯುತ್‌ ಅನ್ನು ಗ್ರಿಡ್‌ಗೆ “ಕನೆಕ್ಟ್’ ಮಾಡಲಾಗುವುದು. 500 ಮೀಟರ್‌ ಒಳಗಿದ್ದರೆ ಅಲ್ಲಿಂದಲೇ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುವುದು. ದೂರ ಇದ್ದರೆ, ಸ್ಟಾಂಡ್‌ ಅಲೋನ್‌ ಮೂಲಕ ಪೂರೈಸಲಾಗುವುದು. ಭೂಮಿ ಅಗತ್ಯಬಿದ್ದರೆ ಲೀಸ್‌ ಪಡೆಯಲಾಗುವುದು, ಇಲ್ಲದಿದ್ದರೆ ವಿದ್ಯುತ್‌ ವಿಭಾಗೀಯ ಉಪಕೇಂದ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲೇ ಘಟಕಗಳನ್ನು ನಿರ್ಮಿಸಲಾಗುವುದು. ಈ ಮಾದರಿಯಲ್ಲಿ ಸುಮಾರು 3 ಸಾವಿರ ಮೆ.ವಾ. ಉತ್ಪಾದನೆ ಗುರಿ ಇದ್ದು, ಮುಂದೊಂದು ವರ್ಷದಲ್ಲಿ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.

ತಿಂಗಳಿಗೆ 2 ಲಕ್ಷ ಟನ್‌ ಹೆಚ್ಚುವರಿ ಕಲ್ಲಿದ್ದಲಿಗೆ ಬೇಡಿಕೆ
ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಮಾಸಿಕ 15 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು, ಹೆಚ್ಚುವರಿ ಎರಡು ಲಕ್ಷ ಟನ್‌ ಕೇಂದ್ರಕ್ಕೆ ಬೇಡಿಕೆ ಇಡಲಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ತಿಳಿಸಿದರು.

ಪೂರೈಕೆಯಾಗುತ್ತಿರುವ ಎಲ್ಲ ಕಲ್ಲಿದ್ದಲನ್ನು ಸಮರ್ಪಕ ಬಳಕೆ ಮಾಡಲಾಗುತ್ತಿದೆ. 2024ರ ಜೂನ್‌ವರೆಗೆ ಪ್ರತಿ ತಿಂಗಳು ಇನ್ನೂ ಎರಡು ಲಕ್ಷ ಟನ್‌ ಹೆಚ್ಚುವರಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಪೂರಕ ಸ್ಪಂದನೆ ದೊರಕಿದೆ ಎಂದು ಮಾಹಿತಿ ನೀಡಿದರು.

* 2023ರ ಏಪ್ರಿಲ್‌- ಅಕ್ಟೋಬರ್‌ವರೆಗೆ 1,627 ಮಿ.ಯೂ. ವಿದ್ಯುತ್‌ ಖರೀದಿಸಿದ್ದು, ಇದರ ಮೊತ್ತ 1,102 ಕೋಟಿ ರೂ. ಆಗಿದೆ.
* 2023ರ ಏಪ್ರಿಲ್‌- ಅಕ್ಟೋಬರ್‌ವರೆಗೆ 636 ಮಿ.ಯೂ. ಮಾರಾಟ ಮಾಡಿದ್ದು, 265 ಕೋಟಿ ರೂ. ಆದಾಯ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next