Advertisement

ಸಾರ್ವಜನಿಕರ ಅಭಿಪ್ರಾಯಕ್ಕೆ ಬದ್ಧ

07:02 PM Mar 29, 2018 | Team Udayavani |

ಈ ಶಿಕ್ಷೆಯನ್ನು ಪ್ರಕಟಿಸುವಾಗ ಕ್ರಿಕೆಟ್‌ ಅಭಿಮಾನಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆದಿದ್ದೇವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ತಿಳಿಸಿದೆ.

Advertisement

“ಸಾರ್ವಜನಿಕರ ಹಾಗೂ ಕ್ರಿಕೆಟ್‌ ಅಭಿಮಾನಿಗಳ ಅಭಿಪ್ರಾಯ ದಂತೆ ನಿಷೇಧದ ಅವಧಿ ಮುಗಿದು ಒಂದು ವರ್ಷದ ವರೆಗೂ ಸ್ಮಿತ್‌ ಹಾಗೂ ಬಾನ್‌ಕ್ರಾಫ್ಟ್ ಅವರನ್ನು ಆಸ್ಟ್ರೇಲಿಯ ತಂಡದ ನಾಯಕತ್ವಕ್ಕೆ ಪರಿಗಣಿಸುವುದಿಲ್ಲ. ವಾರ್ನರ್‌ ಅವರಿಗಂತೂ ಭವಿಷ್ಯದಲ್ಲಿ ಇನ್ನೆಂದೂ ನಾಯಕತ್ವದ ಹೊಣೆಗಾರಿಕೆ ಲಭಿಸದು. 

ಇನ್ನೆರಡು ವರ್ಷಗಳ ಬಳಿಕ ಮತ್ತೆ ಸಾರ್ವಜನಿಕರ ಹಾಗೂ ಕ್ರಿಕೆಟ್‌ ಸಮುದಾಯದ ಅಭಿಪ್ರಾಯ ಹೇಗಿರುತ್ತದೆ ಎಂಬುದನ್ನು ಅವಲೋಕಿಸಿ ಇವರ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು. ವೃತ್ತಿಪರ ಕ್ರಿಕೆಟಿಗರ ಪಾಲಿಗೆ ಇದು ಕಠಿನ ಶಿಕ್ಷೆಯೇ ಆಗಿದೆ. ಇವರ ವಿರುದ್ಧ ಆಸ್ಟ್ರೇಲಿಯದ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಆಕ್ರೋಶದ ಫ‌ಲವಿದು. ಎಲ್ಲರಿಗೂ ಇದೊಂದು ಪಾಠವಾಗಬೇಕು, ಕ್ರಿಕೆಟ್‌ ಮಂಡಳಿ ಇಂಥ ಘಟನೆಗಳನ್ನು ಯಾವತ್ತೂ ಹಗುರವಾಗಿ ಪರಿಗಣಿಸದು ಹಾಗೂ ಎಷ್ಟೇ ಖ್ಯಾತ ಆಟಗಾರನಾಗಿದ್ದರೂ ರಿಯಾಯಿತಿ ನೀಡದು ಎಂಬುದರ ಅರಿವು ಇರಬೇಕು’ ಎಂದು ಆಸ್ಟ್ರೇಲಿಯದ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಡೇವಿಡ್‌ ಪೀವರ್‌ ಹೇಳಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಕ್ರಿಕೆಟ್‌ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್‌ ಸದರ್‌ಲ್ಯಾಂಡ್‌, ಆಟಗಾರರಿಗೆ ವಿಧಿಸಲಾದ ಈ ಶಿಕ್ಷೆಯಿಂದ ತೃಪ್ತಿಯಾಗಿದೆ ಎಂದಿದ್ದಾರೆ.

“ಕ್ರೀಡೆಯ ಸಮಗ್ರತೆ, ಪ್ರತಿಷ್ಠೆ ಹಾಗೂ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಇಂಥದೊಂದು ಕಠಿನ ಕ್ರಮ ಅಗತ್ಯವಾಗಿತ್ತು. ಭವಿಷ್ಯದಲ್ಲಿ ಇಂಥ ಘಟನೆಗಳು ಸಂಭವಿಸಬಾರದು. ಇದು ಉಳಿದ ಕ್ರೀಡಾಪಟುಗಳಿಗೆ ಒಂದು ಪಾಠವಾಗಬೇಕು’ ಎಂದು ಸದರ್‌ಲ್ಯಾಂಡ್‌ ಹೇಳಿದರು.

Advertisement

ಟಿಮ್‌ ಪೇನ್‌ ನಾಯಕ
ನಾಯಕ ಹಾಗೂ ಉಪನಾಯಕರಿಬ್ಬರ ಗೈರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ ಮನ್‌ ಟಿಮ್‌ ಪೇನ್‌ ಅವರು ಆಸ್ಟ್ರೇಲಿಯ ತಂಡವನ್ನು ಮುನ್ನಡೆಸಲಿದ್ದಾರೆ. ಪೇನ್‌ ಕೇವಲ 12 ಟೆಸ್ಟ್‌ ಪಂದ್ಯಗಳ ಅನುಭವಿಯಾಗಿದ್ದು, ವಿವಾದಿತ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ ತಂಡದ ಸದಸ್ಯನಾಗಿದ್ದರು.

ಶಿಕ್ಷೆಯಿಂದ ಪಾರಾದ ಕೋಚ್‌!
ಅಚ್ಚರಿಯೆಂದರೆ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಕೋಚ್‌ ಡ್ಯಾರನ್‌ ಲೇಹ್ಮನ್‌ ಶಿಕ್ಷೆಯಿಂದ ಪಾರಾದದ್ದು! ಮಂಗಳವಾರದ ಪ್ರಾಥಮಿಕ ತನಿಖೆಯ ಬಳಿಕ ಅವರಿಗೆ “ಕ್ಲೀನ್‌ ಚಿಟ್‌’ ನೀಡಲಾಗಿದೆ. 

ಇದಕ್ಕೆ ಸ್ಪಷ್ಟನೆ ನೀಡಿರುವ ಕ್ರಿಕೆಟ್‌ ಆಸ್ಟ್ರೇಲಿಯ, “ಕೋಚ್‌ ಹಾಗೂ ತಂಡದ ಉಳಿದ ಆಟಗಾರರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ತನಿಖೆ ವೇಳೆ ಸಾಬೀತಾಗಿದೆ. ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ ಏನು ಸಂಭವಿಸಿತೋ, ಅದಕ್ಕೆ ಈ ಮೂವರು ಕ್ರಿಕೆಟಿಗರಷ್ಟೇ ಹೊಣೆಗಾರರು’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next