ಬೆಂಗಳೂರು: ಇದು ಪಕ್ಷದ ಗೆಲುವಲ್ಲ; ಕನ್ನಡಿಗರ ಗೆಲುವು. ಜನರ ಈ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ನಾವು ಕೊಟ್ಟ ಐದೂ ಗ್ಯಾರಂಟಿಗಳಿಗೆ ಮೊದಲ ಸಚಿವ ಸಂಪುಟದಲ್ಲೇ ಒಪ್ಪಿಗೆ ನೀಡಲು ಬದ್ಧ. ಅಷ್ಟೇ ಅಲ್ಲ, ಅವುಗಳ ತ್ವರಿತ ಅನುಷ್ಠಾನ ನಮ್ಮ ಗುರಿ…” – ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ಬೀಗುತ್ತಿರುವ ಕಾಂಗ್ರೆಸ್, ರಾಜ್ಯದ ಜನರಿಗೆ ನೀಡಿರುವ ಅಭಯ ಇದು.
ಕಾಂಗ್ರೆಸ್ ಸರಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಪಕ್ಷದ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅಲ್ಲಿ ಚುನಾವಣೆ ಪೂರ್ವ ನೀಡಿದ ಎಲ್ಲ ಭರವಸೆಗಳನ್ನು ಆದ್ಯತೆ ಮೇಲೆ ಈಡೇರಿಸಲಾಗುವುದು. ಆ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಲಾಗುವುದು. ಇದು ನಮ್ಮ ಗ್ಯಾರಂಟಿ ಹೇಳಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯ ನಾಯಕರು ನೀಡಿದ ಗ್ಯಾರಂಟಿಗಳನ್ನು ನಾವು ರಾಜ್ಯಾದ್ಯಂತ ಸುತ್ತಾಡಿ ಹತ್ತಾರು ಬಾರಿ ಹೇಳಿಕೊಂಡು ಬಂದಿದ್ದೇವೆ.
ಅವುಗಳನ್ನು ಈಡೇರಿಸುವುದು ರಾಜ್ಯ ನಾಯಕರ ಮೊದಲ ಆದ್ಯತೆ ಆಗಿರಬೇಕು. ಹಾಗಾಗಿ ನಾವು ಈಗಾಗಲೇ ಹೇಳಿದಂತೆ ಮೊದಲ ಸಂಪುಟದಲ್ಲೇ ಅನು ಮೋದನೆ ಪಡೆಯಬೇಕು. ಜನರ ಬೆಂಬಲ ಮತ್ತು ಉತ್ಸಾಹ ಹೀಗೇ ಮುಂದು ವರಿಯಬೇಕಾದರೆ ಇದು ಅತ್ಯಗತ್ಯ ಎಂದು ತಾಕೀತು ಮಾಡಿದರು. ಬೆಂಗಳೂರಿನಲ್ಲಿ ನಡೆಸಿ ದಂತೆಯೇ ಈ ಹಿಂದೆ ಗುಜರಾತ್‌ನ ಗಲ್ಲಿ-ಗಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿ, ತಾವು ಈ ಭೂಮಿಪುತ್ರ. ದಿಲ್ಲಿಯಲ್ಲಿ ತಲೆತಗ್ಗಿಸುವಂತೆ ಮಾಡಬೇಡಿ ಎಂದು ಕೇಳಿಕೊಂಡರು. ಅದಕ್ಕೆ ಅಲ್ಲಿನ ಜನ ಅವರಿಗೆ ಮತ ಹಾಕಿದರು. ಈಗ ನನ್ನ ಸರದಿ, ನಾನು ಈ ಭೂಮಿಯ ಪುತ್ರ. ರಾಜ್ಯ ಜನ ನನಗೆ ಮತ ಹಾಕದೆ ಇರುತ್ತಾರೆಯೇ ಎಂದರು.
ಅಹಂಕಾರದಿಂದ ಯಾರೇ ಮಾತನಾಡಿದರೂ ಬಹಳ ದಿನ ನಡೆಯುವುದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ತಗ್ಗಿ-ಬಗ್ಗಿ ನಡೆದಾಗ ಮಾತ್ರ ಜನರ ಮನಸ್ಸು ಗೆಲ್ಲಬಹುದು ಎಂಬುದನ್ನು ರಾಜ್ಯದ ಜನ ತೋರಿಸಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.