ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಜಾತಿ, ಧರ್ಮ, ಭಾಷೆ, ಪಕ್ಷ ಬೇಧಭಾವ ಮರೆತು ತಮ್ಮನ್ನು ಅಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿದ ಜನರಿಗೆ ಜೀವನ ಪೂರ್ತಿ ಅವರ ಸೇವೆ ಮಾಡಿದರೂ ಅವರ ಋಣ ತೀರಿಸಲು ಆಗುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ರವಿವಾರ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಾಗೂ ಮುಖಂಡರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ. ಇದರ ಅಭಿವೃದ್ಧಿಗೆ ಮಾತು ಕೊಟ್ಟಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಸರಕಾರದ ಎಲ್ಲ ಇಲಾಖೆಗಳ ಸಚಿವರನ್ನು ಭೇಟಿಯಾಗಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದೇನೆ. ಪ್ರತಿಯೊಬ್ಬರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ಕೆಲವರು ಭೇಟಿಯಾಗದಂತೆ ಅಡ್ಡಿ ಪಡಿಸಿದ್ದರು. ಆಗ ಅಡ್ಡಿಪಡಿಸಿದವರು ಎಲ್ಲಿ ಇದ್ದರೋ ಅಲ್ಲಿಯೇ ಇದ್ದಾರೆ. ನಾನು ನಿಮ್ಮೆಲ್ಲರ ಆರ್ಶಿವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅಧಿಕಾರ ಮುಖ್ಯ ಎಂದು ನಾನೆಂದೂ ಭಾವಿಸಿಲ್ಲ. ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ಮಳೆಗಾಲದ ನಂತರ ಪ್ರತಿಯೊಂದು ಗ್ರಾಮದಲ್ಲಿಯೂ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವುದಾಗಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಕ್ಕಳು ಮಳೆ ನೀರಿನಲ್ಲಿ ಕುಳಿತು ಪಾಠ ಕಲಿಯುವ ಪರಿಸ್ಥಿತಿ ಇದೆ. ಇದಕ್ಕಾಗಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶಾಲೆಗಳ ದುರಸ್ಥಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಕ್ಷೇತ್ರದ ಕೆರೆ ತುಂಬಿಸುವ ಯೋಜನೆಯ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಕ್ಷೇತ್ರದ ಹಿಂದಿನ ಶಾಸಕರು ಕಳೆದ ಹತ್ತು ವರ್ಷಗಳಿಂದ ನನಗೆ ಗ್ರಾಪಂನ ಸದಸ್ಯೆಯಾಗುವ ಭಾಗ್ಯ ಇಲ್ಲ ಎಂದು ಚುಚ್ಚಿ ಮಾತನಾಡಿದ್ದರು. ಮಾಜಿ ಶಾಸಕರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ವಿರೋಧಿಗಳಿಗೆ ನೀವೇ ಉತ್ತರ ನೀಡಿದ್ದೀರಾ. ಈಗ ನಿಮ್ಮೆಲ್ಲರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸಿ.ಸಿ.ಪಾಟೀಲ, ಯುವರಾಜ ಕದಂ, ಯಲ್ಲಪ್ಪ ಡೆಕೋಳಕರ, ಬಾಪುಗೌಡ ಪಾಟೀಲ, ಅಡಿವೇಶ ಇಟಗಿ ಮಾತನಾಡಿ ಶಾಸಕರನ್ನು ಕ್ಷೇತ್ರದ ಜನರು ಸತ್ಕಾರ ಮಾಡುವುದನ್ನು ನೋಡಿದ್ದೇವೆ. ಆದರೆ ಹೆಬ್ಟಾಳಕರ ಅವರು ತಮ್ಮ ಕ್ಷೇತ್ರದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಅಭಿನಂಧನಾ ಸಮಾರಂಭ ಏರ್ಪಡಿಸಿರುವುದು ಹೆಮ್ಮೆ ಎನ್ನಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರು ಲಕ್ಷ್ಮೀ ಹೆಬ್ಟಾಳಕರ ಅವರಿಗೆ ಬೆಳ್ಳಿಯ ಖಡ್ಗವನ್ನು ನೀಡಿ ಸನ್ಮಾನಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ತಮ್ಮನ್ನು ಮನೆಯ ಮಗಳೆಂದು ಹಾರೈಸಿದ್ದಾರೆ. ಆದರೆ ಕೆಲವರು ಈಗ ಲೋಕಸಭಾ ಚುನಾವಣೆಯಲ್ಲಿ ಹೆಬ್ಟಾಳಕರ ಅವರೇ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದಾರೆ. ಆದರೆ ನಾನು ಗ್ರಾಮೀಣ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.
ಲಕ್ಷ್ಮೀ ಹೆಬ್ಟಾಳಕರ,
ಶಾಸಕಿ, ಬೆಳಗಾವಿ ಗ್ರಾಮೀಣ