Advertisement

ಸಂವಿಧಾನ ಆಶಯಕ್ಕೆ ಬದ್ಧರಾಗಿ

09:18 PM Apr 28, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಸರ್ಕಾರದ ಸೇವೆಯಲ್ಲಿದ್ದಾಗ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಕಾನೂನು ಚೌಕಟ್ಟಿನಲ್ಲಿ ಬದ್ಧವಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸರ್ಕಾರಿ ಸೇವೆಯಲ್ಲಿ ಸಾರ್ಥಕತೆ ಪಡೆದು ಜನಮನ್ನಣೆ ಗಳಿಸಬಹುದು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಜಿಲ್ಲಾ ನ್ಯಾಯಾಲಯ ಹಾಗೂ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉತ್ತಮ ಸೇವೆ: ನ್ಯಾಯಾಂಗ ಇಲಾಖೆ ಇಂದಿಗೂ ಜನರ ವಿಶ್ವಾಸ, ನಂಬಿಕೆ ಉಳಿಸಿಕೊಂಡಿದೆ ಅಂದರೆ ಅಧಿಕಾರಿಗಳ ಹಾಗೂ ನ್ಯಾಯಾಧೀಶರ ಪ್ರಾಮಾಣಿಕ ಸೇವೆ, ಜನಪರವಾದ ತೀರ್ಪುಗಳೇ ಕಾರಣ. ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಗಾವಣೆ ಖಾಯಂ ಆಗಿರುತ್ತದೆ. ಸೇವೆಯನ್ನು ಸಾರ್ಥಕತೆ ಪಡಿಸಿಕೊಳ್ಳುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕೆಂದರು. ಹಲವು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ 2 ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಸಾಯೆಬಾ ಸುಲ್ತಾನ, 2 ನೇ ಹೆಚ್ಚುವರಿ ಕಿರಿಯ ಸಿವಿಲ್‌ ನ್ಯಾಯಾಧೀಶೆ ಶೈಲಜಾ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ನ್ಯಾಯಸಮ್ಮತ ತೀರ್ಪು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್‌.ತಮ್ಮೇಗೌಡ ಮಾತನಾಡಿ, ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿರುವ ಇಬ್ಬರೂ ನ್ಯಾಯಾಧೀಶರು ನಿಷ್ಪಕ್ಷಪಾತ ತೀರ್ಪುಗಳಿಗೆ ಹೆಸರಾದವರು. ಇಲ್ಲಿದ್ದ ಕಡಿಮೆ ಅವಧಿಯಲ್ಲಿ ಎಲ್ಲಾ ವಕೀಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಪೀಠದ ಮುಂದೆ ಬರುವ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಸಮ್ಮತವಾಗಿ ನ್ಯಾಯದಾನ ಮಾಡಿದ್ದಾರೆ. ಇವರ ಸಲಹೆ ಮಾರ್ಗದರ್ಶನ ನಮಗೆ ಅಲಭ್ಯವಾಗುತ್ತಿರುವುದಕ್ಕೆ ಬೇಸರವಾಗಿದೆ ಎಂದರು.

ಕಿರಿಯರಿಗೆ ಬುದ್ಧಿವಾದ: ವಕೀಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್‌ ಮಾತನಾಡಿ, ಇಬ್ಬರೂ ನ್ಯಾಯಾಧೀಶರು ಕೂಡ ನ್ಯಾಯಾಲಯದ ಕಲಾಪಗಳಲ್ಲಿ ಲವಲವಿಕೆಯಿಂದ ಭಾಗವಹಿಸಿ ಸಕಾಲದಲ್ಲಿ ನ್ಯಾಯದಾನವಾಗುವಂತೆ ನೋಡಿಕೊಂಡಿದ್ದಾರೆ. ಇದರೊಟ್ಟಿಗೆ ನ್ಯಾಯವಾದಿಯಾಗಿ ವೃತ್ತಿ ಪ್ರಾರಂಭಿಸಿರುವ ಕಿರಿಯ ವಕೀಲರಿಗೆ ಕಾಲ ಕಾಲಕ್ಕೆ ಬುದ್ಧಿವಾದ ಹೇಳುತ್ತಾ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದ ಪರಿ ಇವರ ಸೇಹಶೀಲ ವ್ಯಕ್ತಿತ್ವವನ್ನು ಎತ್ತಿ ತೋರುವಂತಿತ್ತು. ಇಂತಹ ಪ್ರಾಮಾಣಿಕ ದಕ್ಷ ನ್ಯಾಯಾಧೀಶರು ವರ್ಗಾವಣೆ ಆಗಿರುವುದು ಬೇಸರದ ಸಂಗತಿ ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಮೂರನೇ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರಾದ ಲೋಕೇಶ್‌, ನಟರಾಜ್‌, ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಖಜಾಂಚಿ ನವೀನ್‌ಕುಮಾರ್‌, ಹಿರಿಯ ವಕೀಲರಾದ ಸುಬ್ರಹ್ಮಣಿ, ನಾರಾಯಣ ಮೂರ್ತಿ, ಬಾಲಕೃಷ್ಣರಾಜು, ಎಚ್‌.ವಿ.ನಾರಾಯಣಪ್ಪ ಇದ್ದರು.

ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವವರು ಯಾವುದೇ ಜಾತಿ, ದ್ವೇಷಗಳಿಗೆ ಆಸ್ಪದ ಇಲ್ಲದಂತೆ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಿದೆ. ಸರ್ಕಾರಿ ಸೇವೆ ಹೆಸರಿಗೆ ಮಾತ್ರ ದೇವರ ಸೇವೆ ಆಗಬಾರದು. ಕಾಯಕದಲ್ಲಿ ಕೂಡ ನಾವು ವೃತ್ತಿ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next