Advertisement

ದಿವ್ಯಾಂಗರಿಗೆ ಆಯೋಗದ “ಆಸರೆ’

02:17 AM Mar 22, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ “ಯಾವುದೇ ಮತದಾರ ಮತದಾನದಿಂದ ಹೊರಗಡೆ ಉಳಿಯಬಾರದು’ ಎಂದು ಘೋಷವಾಕ್ಯ ಕೊಟ್ಟಿರುವ ಚುನಾವಣಾ ಆಯೋಗ, ಪ್ರತಿ ಅರ್ಹ ಮತದಾರ ಮತಗಟ್ಟೆಗೆ ಬಂದು, ಮುಕ್ತವಾಗಿ ಮತದಾನ ಮಾಡುವಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

Advertisement

ವಿಶೇಷವಾಗಿ ಈ ಬಾರಿ ದಿವ್ಯಾಂಗ ಮತದಾರರ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಆಯೋಗ, ಅವರಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದ 33 ಚುನಾವಣಾ ಜಿಲ್ಲೆಗಳು ಹಾಗೂ 28 ಲೋಕಸಭಾ ಕ್ಷೇತ್ರಗಳ 35,739 ಮತಗಟ್ಟೆಗಳಲ್ಲಿ ಇಲ್ಲಿವರೆಗೆ 4.04 ಲಕ್ಷ ದಿವ್ಯಾಂಗ ಮತದಾರರನ್ನು ಗುರುತಿಸಿದೆ. ಅವರ ನೆರವಿಗೆ 35,739 ಗಾಲಿ ಕುರ್ಚಿಗಳು, 41,669 ಭೂತಗನ್ನಡಿಗಳು, 2,213 ಸಂಜ್ಞಾ ಭಾಷೆ ವಿವರಣೆಗಾರರು ಮತ್ತು 31,515 ಸಹಾಯಕರನ್ನು ಒದಗಿಸುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಮಾತನಾಡಿ, ರಾಜ್ಯದಲ್ಲಿ ದಿವ್ಯಾಂಗ ಮತದಾರರಿಗೆ ಕೈಗೊಳ್ಳಲಾದ ಕ್ರಮಗಳ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.ಇದಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ.

ಅಗತ್ಯವಿರುವ ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿಗಳು, ಅಂಗವಿಕಲರ ಸೌಲಭ್ಯಗಳ ಕುರಿತ ಸಂಜ್ಞೆ ಭಾಷೆ, ಚಿತ್ರ ಮತ್ತು ದೃಶ್ಯಗಳನ್ನು ಹೆಚ್ಚಾಗಿ ಬಳಸಲಾಗಿರುವ ಬ್ರೈಲ್‌ ಲಿಪಿಯ ಪೋಸ್ಟರ್‌ಗಳು, ಎಲ್ಲ ಮತದಾನ ಕೇಂದ್ರಗಳಲ್ಲಿ ಬ್ರೈಲ್‌ನಲ್ಲಿ ಮುದ್ರಿಸಲಾದ ಮಾದರಿ ಮತಪತ್ರಗಳು, ಬ್ರೈಲ್‌ ಫೋಟೋ ಎಪಿಕ್‌ ಕಾರ್ಡ್‌, ಸಾರಿಗೆ ವ್ಯವಸ್ಥೆ ಸೇರಿದಂತೆ ರ್‍ಯಾಂಪ್‌, ಚಿಕಿತ್ಸಾ ಕಿಟ್‌, ಕುಡಿಯುವ ನೀರು, ನೆರಳು ಮತ್ತು ಬೆಳಕಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಗಿರೀಶ್‌ ರಾಯಭಾರಿ
2019ರ ಲೋಕಸಭಾ ಚುನಾವಣೆಗೆ ಪ್ಯಾರಾ ಒಲಿಂಪಿಕ್‌ ಕ್ರೀಡಾಪಟುಪದ್ಮಶ್ರೀ ಪುರ ಸ್ಕೃತ ಗಿರೀಶ್‌ ಎನ್‌. ಗೌಡ ಕರ್ನಾಟಕದ ಚುನಾವಣಾ ರಾಯಭಾರಿ ಆಗಿದ್ದಾರೆ. ಕಳೆದ ವೇಳೆಯೂ ಜಾಗೃತಿಗೆ ಸಕ್ರಿಯ ಪಾತ್ರ ವಹಿಸಿದ್ದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಇದರ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಗಿರೀಶ್‌ ಗೌಡ, ಮತದಾನ
ಪ್ರತಿಯೊಬ್ಬ ಪ್ರಜೆಯ ಹಕ್ಕು. ಪ್ರಜಾಪ್ರಭುತ್ವ ಗೆಲ್ಲಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next