Advertisement
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ವಿಕಾಸೌಧದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ “ಬಹಿರಂಗ ವಿಚಾರಣೆ ಆಧಿವೇಶನ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಆಯೋಗದ ಶಿಫಾರಸುಗಳ ಪ್ರಕಾರ ಕ್ರಮ ಜಾರಿ ವರದಿ ಸಲ್ಲಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಡೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
Related Articles
Advertisement
190 ದೂರುಗಳ ವಿಚಾರಣೆ: ಆ.2 ಮತ್ತು 3 ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆ ಅಧಿವೇಶನದಲ್ಲಿ ಒಟ್ಟು 190 ದೂರುಗಳನ್ನು ಇತ್ಯರ್ಥಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಪ್ರತ್ಯೇಕವಾಗಿ ನಾಲ್ಕು ತಾತ್ಕಾಲಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.
ಆಯೋಗದ ಅಧ್ಯಕ್ಷ ನ್ಯಾ. ಎಚ್.ಎಲ್ ದತ್ತು, ಸದಸ್ಯರಾದ ನ್ಯಾ. ಪಿ.ಸಿ ಘೋಷ್, ನ್ಯಾ. ಡಿ. ಮುರಗೇಷನ್ ನ್ಯಾ. ಜ್ಯೋತಿಕಾ ಕಲಾ ಪ್ರತ್ಯೇಕವಾಗಿ ಪ್ರಕರಣ ವಿಚಾರಣೆ ನಡೆಸಿದರು. ಗುರುವಾರ ವಿಚಾರಣೆಗೆ ಬಂದ ದೂರುಗಳ ಪೈಕಿ ಬಹುತೇಕ ಜಾತಿ ನಿಂದನೆ, ಶೋಷಣೆ, ಭೂಒತ್ತುವರಿ, ಪರಿಹಾರ, ಪಿಂಚಣಿ ಸೌಲಭ್ಯದ ಪ್ರಕರಣಗಳೇ ಹೆಚ್ಚಾಗಿದ್ದವು.
ಶಿಕ್ಷಣಾಧಿಕಾರಿಗಳಿಗೆ ತರಾಟೆ: ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರಿಗೆ ಉನ್ನತ ಶಿಕ್ಷಣಕ್ಕೆ (ಬಿಪಿ.ಎಡ್) ಅವಕಾಶ ನಿರಾಕರಿಸಿರುವ ಬಗ್ಗೆ ವಿವರವಾದ ವರದಿ ಕೊಡುವಂತೆ ಆಯೋಗದ ನ್ಯಾ. ಎಚ್.ಎಲ್. ದತ್ತು ಅಧ್ಯಕ್ಷ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಬಿಪಿ.ಎಡ್ ಕಲಿಯಲು ಏಕ ಕಾಲದಲ್ಲಿ ಅರ್ಜಿ ಸಲ್ಲಿಸಿದ್ದರೂ ನನ್ನ ಅರ್ಜಿ ತಿರಸ್ಕರಿಸಿ, ನನ್ನ ಸಹೋದ್ಯೋಗಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಕೊಡಲಾಗಿದೆ ಎಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ಶಿಕ್ಷಕ ರವಿಕಿರಣ್ ದೂರಿದರು.
ಬೆಳಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾ. ದತ್ತು, ಕಾನೂನು ಪ್ರಕಾರ ಅವಕಾಶವಿದ್ದರೂ ಯಾಕೆ ಅವಕಾಶ ಕೊಟ್ಟಿಲ್ಲ ಎಂದರು. ಈ ಬಗ್ಗೆ ಮಧ್ಯಾಹ್ನ ಬಂದು ಹಿರಿಯ ಅಧಿಕಾರಿಗಳು ವಿವರಣೆ ನೀಡಲಿ. ಇಲ್ಲವೆಂದರೆ, ದೂರುದಾರನಿಗೆ ಪ್ರತಿ ವರ್ಷ ನಾಲ್ಕು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡುತ್ತೇನೆ ಎಂದು ಎಚ್ಚರಿಸಿದರು. ಇಲಾಖಾಧಿಕಾರಿ ಮಾಹಿತಿ ನೀಡಿದಾಗ, ಪೂರ್ಣ ವರದಿ ನೀಡಲು ಸೂಚಿಸಿದರು.
ಭೂಮಾಲೀಕನಿಗೆ ಪರಿಹಾರದ ಭರವಸೆ: ಮೆಟ್ರೋ ಯೋಜನೆಗೆ ಜಮೀನು ಕಳೆದುಕೊಂಡಿರುವ ಭೂಮಾಲೀಕನಿಗೆ ಕೊಡಬೇಕಾಗಿರುವ 14 ಲಕ್ಷ ರೂ. ಪರಿಹಾರ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸುವಂತೆ ಮೆಟ್ರೋ ಮತ್ತು ಕೆಎಐಡಿಬಿ ಅಧಿಕಾರಿಗಳಿಗೆ ನ್ಯಾ. ಎಚ್.ಎಲ್ ದತ್ತು ಆದೇಶಿಸಿದರು.
ಬೆನ್ನಿಗಾನಹಳ್ಳಿ ನಿವಾಸಿ ಪ್ರಕಾಶ್, ಮೆಟ್ರೋ ಮಾರ್ಗ ವಿಸ್ತರಣೆಗೆ ತಮ್ಮ ಕುಟುಂಬಕ್ಕೆ ಸೇರಿದ 135 ಅಡಿ ಜಾಗ ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಅಳಲು ತೋಡಿಕೊಂಡರು. ಮನೆ ತೆರವುಗೊಳಿಸಿದ್ದರೆ ಮೆಟ್ರೋ ಮಾರ್ಗ ವಿಸ್ತರಣೆ ಸಾಧ್ಯವಿಲ್ಲ. ಜಮೀನಿಗೆ ಬದಲಾಗಿ ಪರಿಹಾರ ಕೊಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪರಿಹಾರ ಕೊಡಿಸುವ ಭರವಸೆ ನೀಡಿದರು.
ಪತಿಯ ಬದಲಿಗೆ ಬಂದ ಪತ್ನಿಗೆ ತಾಕೀತು: ತನ್ನ ಪತಿಗೆ ಅನ್ಯಾಯವಾಗಿದೆ ಎಂದು ದೂರಿದ್ದ ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯ (ಸಿಎಫ್ಟಿಆರ್‌ಐ) ಉದ್ಯೋಗಿಯೊಬ್ಬರ ಪತ್ನಿ ಮಾಧವಿ ಮುಕುಂದ ಪದ್ಮಾರೆ ಅವರನ್ನು ನ್ಯಾ. ದತ್ತು ತೀವ್ರ ತರಾಟೆಗೆ ತೆಗೆದುಕೊಂಡರು.
ದೂರಿನ ವಿಚಾರಣೆ ನಡೆಸಿದ ಅವರು, ಆರೋಪ ಇರುವುದು ನಿಮ್ಮ ಪತಿ ಮೇಲೆ, ಆದರೆ ವಿಚಾರಣೆ ನೀವ್ಯಾಕೆ ಬಂದಿದ್ದೀರಿ. ಇದೊಂದು ದಂಡ ಸಮೇತ ವಜಾಗೊಳಿಸಲು ಅರ್ಹವಾದ ಪ್ರಕರಣ. ನಿಮ್ಮ ಪತಿಯ ಮೇಲೆ ಹಣ ದುರ್ಬಳಕೆ ಆರೋಪವಿದೆ. ಅಲ್ಲದೇ ಲೈಂಗಿಕ ದೌರ್ಜನ್ಯದ ಆರೋಪ ಸಹ ಇದೆ ಎಂದರು.
ಹಣ ದುರ್ಬಳಕೆ ಆರೋಪ ಅಲ್ಲಗಳೆದ ಮಾಧವಿ, ಲೈಂಗಿಕ ದೌರ್ಜನ್ಯದ ವಿಚಾರ ಕೇವಲ ಫೇಸ್‌ಬುಕ್, ವಾಟ್ಸ್‌ಪ್‌ಗೆ ಸೀಮಿತವಾಗಿತ್ತು ಎಂದು ಸಮಜಾಯಿಷಿ ನೀಡಿದರು. ಇದೇ ವೇಳೆ ಸಿಎಫ್ಟಿಆರ್‌ಐ ಅಧಿಕಾರಿಗಳು ಆರೋಪಗಳಿಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸಿದರು. ಸಕ್ಷಮ ಪ್ರಾಧಿಕಾರದ ಮುಂದೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.