Advertisement

ಆಯುಕ್ತರ ಬಳಿ ಕೊಳೆಯುತ್ತಿದೆ 40 ಕೋಟಿ ಬೆಳೆವಿಮೆ

11:31 AM Sep 08, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ 2016-17ನೇ ಹಿಂಗಾರು ಹಂಗಾಮಿನಲ್ಲಿ ಬರದ ಪರಿಸ್ಥಿತಿಯಿಂದ ರೈತರ ಖಾತೆಗೆ ಜಮೆಯಾಗಬೇಕಿದ್ದ 40 ಕೋಟಿ ಬೆಳೆ ವಿಮೆಯೂ ಕೃಷಿ ಇಲಾಖೆ ಆಯುಕ್ತರ ಬಳಿ ಕೊಳೆಯುತ್ತಿದೆ. 17,773 ರೈತರ ಖಾತೆಯಲ್ಲಿ ವ್ಯತ್ಯಾಸವಾಗಿದೆ ಎಂದು ಕೃಷಿ ಇಲಾಖೆ ನೆಪ ಹೇಳುತ್ತಿದ್ದು, ಇತ್ತೀಚೆಗೆ ಆರಂಭಿಕ 200 ಖಾತೆಗೆ ಹಣ ಜಮೆ ಮಾಡಲು ಮತ್ತೆ ತೊಂದರೆ ಉಂಟಾಗಿದೆ. ಹೀಗಾಗಿ ವಿಮೆ ಬರೋದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

Advertisement

ಹೌದು. ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗಿ ರೈತ ಸಮೂಹ ಸಂಕಷ್ಟ ಎದುರಿಸುತ್ತಿದೆ. ಬೆಳೆ ವಿಮೆಯಾದರೂ ರೈತರ ಕೈ ಹಿಡಿಯಲಿದೆ ಎಂದು ನಂಬಿ 2016-17ರಲ್ಲಿ ಹಿಂಗಾರಿನ ಹಂಗಾಮಿನಲ್ಲಿ ಸಾವಿರಾರು ರೈತರು ಬ್ಯಾಂಕ್‌ಗಳ ಮುಂದೆ ನಿಂತು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಕೆಲವು ರೈತರ ಖಾತೆಗೆ ವಿಮೆ ಮೊತ್ತ ಬಂದಿದ್ದರೆ ಇನ್ನೂ ಹಲವು ರೈತರಿಗೆ ವಿಮೆ ಮೊತ್ತವೇ ಬಂದಿಲ್ಲ. ರೈತರು ನಮಗೆ ವಿಮೆ ಬಂದಿಲ್ಲವೆಂದು ಹಲವು ಬಾರಿ ಡಿಸಿ ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಪ್ರತಿಭಟನೆ, ಹೋರಾಟ, ಮನವಿಯನ್ನು ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ರೈತರ ಬ್ಯಾಂಕ್‌ ಖಾತೆಯಲ್ಲಿನ ದೋಷ, ವ್ಯತ್ಯಾಸದಿಂದ 17,723 ರೈತರ ಖಾತೆಗೆ 40 ಕೋಟಿ ರೂ. ಬೆಳೆ ವಿಮೆ ಮೊತ್ತ ಬರಬೇಕಿದೆ. ವಿಮಾ ಮೊತ್ತವನ್ನು ಕಂಪನಿಯೂ ಕೃಷಿ ಇಲಾಖೆಗೆ ವರ್ಗಾಯಿಸಿದೆ. ಸದ್ಯ ರಾಜ್ಯ ಕೃಷಿ ಇಲಾಖೆಯ ಖಾತೆಯಲ್ಲಿ ಜಿಲ್ಲೆಯ 40 ಕೋಟಿ ರೂ. ಹಣವಿದೆ.

ಆಗಿರುವುದು ಏನು?: ಬೆಳೆ ವಿಮೆ ತುಂಬುವ ವೇಳೆ ನಮ್ಮ ಬಳಿ ಇರುವ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿದ್ದೇವೆ. ದೋಷ ನಮ್ಮಿಂದ ಆಗಲಿಲ್ಲ. ಕೆಲವೊಂದು ಮರಣದ ಪ್ರಕರಣಗಳು ಬಿಟ್ಟರೆ ರೈತನ ಕಡೆಯಿಂದ ದೊಡ್ಡ ಪ್ರಮಾಣದ ತಪ್ಪಾಗಿಲ್ಲ. ವಿನಾಕಾರಣ ಕೃಷಿ ಹಾಗೂ ವಿಮಾ ಕಂಪನಿ ವಿಳಂಬ ಮಾಡುತ್ತಿವೆ. ಬ್ಯಾಂಕ್‌ನ ಸಿಬ್ಬಂದಿ ರೈತನ ಬ್ಯಾಂಕ್‌ ಖಾತೆ, ಇತರೆ ಮಾಹಿತಿ ಸರಿಯಾಗಿ ನಮೂದು ಮಾಡಿದರೆ ಇಷ್ಟೆಲ್ಲ ತೊಂದರೆ ಎದುರಾಗಲ್ಲ. ಅವರು ಮಾಡುವ ಎಡವಟ್ಟಿನಿಂದ ವಿಮೆ ಮೊತ್ತ ನಮ್ಮ ಕೈ ಸೇರದಂತಹ ಪರಿಸ್ಥಿತಿ ಬಂದಿದೆ ಎನ್ನುತ್ತಿದೆ ರೈತ ಸಮೂಹ.

ಕೃಷಿ ಇಲಾಖೆ ಹೇಳ್ಳೋದೇನು?: ಬೆಳೆ ವಿಮೆ ಮಾಡಿಸುವ ವೇಳೆ ರೈತರು ಕೊಟ್ಟ ಬ್ಯಾಂಕ್‌ ಖಾತೆಯಲ್ಲಿ ಕೆಲವೊಂದು ವ್ಯತ್ಯಾಸ ಇವೆ. ಅಲ್ಲದೇ, ಇತ್ತೀಚಿನ ವರ್ಷದಲ್ಲಿ ಒಂದೇ ಬ್ಯಾಂಕ್‌ನಲ್ಲಿ ಹಲವು ಬ್ಯಾಂಕ್‌ಗಳು ವಿಲೀನವಾಗಿವೆ. ಹಾಗಾಗಿ ಆಯಾ ಬ್ಯಾಂಕ್‌ಗಳ ಐಎಸ್‌ಎಸ್‌ಸಿ ಕೋಡ್‌, ಬ್ಯಾಂಕ್‌ ಕೋಡ್‌ ಸೇರಿ ಇತರೆ ಕೆಲವು ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ. ಕೆಲ ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿಲ್ಲ ಎನ್ನುತ್ತಿದೆ ಕೃಷಿ ಇಲಾಖೆ.

Advertisement

ಪ್ರಾರಂಭಿಕ 200 ಖಾತೆಯಲ್ಲಿ ದೋಷ: ಸದ್ಯ 40 ಕೋಟಿ ರೂ. ವಿಮೆ ಮೊತ್ತ ಕೃಷಿ ಇಲಾಖೆಯಲ್ಲಿದ್ದು, 17,723 ರೈತರ ಖಾತೆಯಲ್ಲಿ ಈಗಷ್ಟೇ 200 ರೈತರ ಖಾತೆಯನ್ನು ರಾಜ್ಯ ಇಲಾಖೆಗೆ ಕಳುಹಿಸಿದ್ದು, ಅದರಲ್ಲೂ ವ್ಯತ್ಯಾಸ ಕಂಡು ಬಂದಿವೆ. ಹೀಗಾಗಿ ಮತ್ತೆ ಅದನ್ನು ಸರಿಪಡಿಸಲು ಕೃಷಿ ಇಲಾಖೆ ತಲೆ ಬಿಸಿ ಮಾಡಿಕೊಂಡಿದೆ. ಇದೆಲ್ಲವನ್ನೂ ನೋಡಿದರೆ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆ ಆಗುವುದು ವಿಳಂಬ ಎನ್ನುವುದು ಇಲಾಖೆಯ ಮೂಲಗಳಿಂದೇ ಕೇಳಿ ಬಂದಿದೆ. ಯಾರೋ ಮಾಡುವ ಎಡವಟ್ಟಿಗೆ ರೈತರು ಬೆಳೆ ವಿಮೆ ಹಣಕ್ಕಾಗಿ ಪರಿತಪಿಸುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಬ್ಯಾಂಕ್‌ ಸಿಬ್ಬಂದಿ ಎಡವಟ್ಟು, ಕೃಷಿ ಇಲಾಖೆಯ ನಿಷ್ಕಾಳಜಿ ಇಲ್ಲಿ ಎದ್ದು ಕಾಣುತ್ತಿದೆ ಎಂದು ರೈತ ಸಮೂಹ ಆಪಾದನೆ ಮಾಡುತ್ತಿದೆ.

ವಿಮೆ ಮೊತ್ತ ಜಮೆ ಮಾಡಲು 17,723 ರೈತರ ಖಾತೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ 40 ಕೋಟಿ ಇಲಾಖೆಯಲ್ಲಿದ್ದು, ಖಾತೆ ವ್ಯತ್ಯಾಸ ಸರಿಪಡಿಸುತ್ತಿದ್ದೇವೆ. ಇತ್ತೀಚೆಗೆ 200 ಖಾತೆ ಸರಿಪಡಿಸಿ ರಾಜ್ಯ ಇಲಾಖೆಗೆ ಸಲ್ಲಿಸಿದ್ದೇವೆ. ಅದರಲ್ಲೂ ಮತ್ತೆ ವ್ಯತ್ಯಾಸ ಕಂಡು ಬಂದಿವೆ. ಎಲ್ಲವೂ ಸರಿಪಡಿಸುವ ಕೆಲಸ ನಡೆದಿದೆ.•ಶಬಾನಾ ಶೇಖ್‌, ಜಂಟಿ ಕೃಷಿ ನಿರ್ದೇಶಕಿ

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next