Advertisement

ಕಮಿಷನರೆಟ್‌ ಕಚೇರಿ: ದಲಿತರ ಕುಂದುಕೊರತೆ ಸಭೆ

09:16 AM Jan 29, 2018 | Team Udayavani |

ಮಹಾನಗರ: ಸರಕಾರಿ ಸೌಲಭ್ಯಕ್ಕಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ವಿಚಾರ ರವಿವಾರ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪವಾಗಿ ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.

Advertisement

ನಗರದ ಮೇರಿಹಿಲ್‌ನ ಶಿವನಾಥನ್‌ ತನ್ನ ಪುತ್ರ ಕಾರ್ತಿಕೇಯನ್‌ಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಮಾಡಿಸಿ ಅದನ್ನು ಕಾರ್ತಿಕೇಯನ್‌ ಕಲಿಯುತ್ತಿರುವ ಕಾವೂರಿನ ಬಿಜಿಎಸ್‌ ಶಾಲೆಗೆ ಸಲ್ಲಿಸಿದ್ದಾರೆ ಎಂದು ವಿಷಯ ಪ್ರಸ್ತಾವಿಸಿದ ದಲಿತ ನಾಯಕ ಆನಂದ ಎಸ್‌.ಪಿ. ಅವರು ಆರೋಪಿಸಿದರು. ಈ ವಿಷಯದಲ್ಲಿ ತಹಶೀಲ್ದಾರರು, ಕಾರ್ತಿಕೇಯನ್‌ನ ತಂದೆ ಶಿವನಾಥನ್‌, ಬಿಜಿಎಸ್‌ ಶಿಕ್ಷಣ ಸಂಸ್ಥೆ ಮತ್ತು ಕರ್ನಾಟಕ ಬೋವಿ ಕ್ಷೇಮಾಭಿವೃದ್ಧಿ ಸಂಘದವರು ಶಾಮೀಲಾಗಿರುವ ಶಂಕೆ ಇದ್ದು, ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಜರಗಿಸಬೇಕು. ಈ ಕುರಿತಂತೆ ಲೋಕಾಯುಕ್ತಕ್ಕೆ ಈಗಾಗಲೇ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದು, ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಈಗ ತನಿಖೆಯ ಹಂತದಲ್ಲಿದೆ ಎಂದವರು ತಿಳಿಸಿದರು.

ಶಿವನಾಥನ್‌ ಅವರು ಆಂಧ್ರ ಮೂಲದ ನಾಯ್ಡು ಸಮುದಾಯಕ್ಕೆ ಸೇರಿದವರಾಗಿದ್ದು, ಆಂಧ್ರದ ನಾಯ್ಡು ಜನಾಂಗ ಕರ್ನಾಟಕದ ಬೋವಿ ಜನಾಂಗಕ್ಕೆ ಸಮಾನವಾಗಿದೆ. ಆದರೆ ಬೋವಿ ಜನಾಂಗ ಪರಿಶಿಷ್ಟ ಸಮುದಾಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಆನಂದ ಎಸ್‌.ಪಿ. ವಿವರಿಸಿದರು.

ತನಿಖೆ ನಡೆಯಲಿ
ಇದು ನಮ್ಮ ಕಣ್ಣೆದುರಿಗೆ ಇರುವ ಒಂದು ಪ್ರಕರಣ. ಸರಕಾರಿ ಸೌಲಭ್ಯ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿರುವ ಇಂಥ ಹಲವಾರು ಪ್ರಕರಣಗಳಿರಬಹುದು. ಆದ್ದರಿಂದ ಇಂಥ ಪ್ರಕರಣಗಳ ಕುರಿತಂತೆ ಸಂಬಂಧ ಪಟ್ಟ ಎಲ್ಲರ ಬಗೆಗೂ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡು ಬರುವ ಎಲ್ಲರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ಅವರು, ಈ ಪ್ರಕರಣದ ಬಗ್ಗೆ ಮಂಗಳೂರು ಉಪ ವಿಭಾಗಾಧಿಕಾರಿ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂದರು.

Advertisement

ಅಧಿಕಾರಿಗಳ ಮುಖೇನ ಮಾಹಿತಿ
ದಲಿತ ಮುಖಂಡರು ಕಾರ್ಯಾಗಾರ ನಡೆಸುವ ಬಗ್ಗೆ ಆಸಕ್ತಿ ಇರುವ ದಲಿತ ಕಾಲನಿಗಳ ಮಾಹಿತಿ ಕಲೆ ಹಾಕಿ ಒದಗಿಸಿದರೆ, ಅಲ್ಲಿ ಬೀಟ್‌ ಮೀಟಿಂಗ್‌ ನಡೆಸಿ ಅಧಿಕಾರಿಗಳ ಮುಖೇನ ಮಾಹಿತಿ ನೀಡಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.

ಸಾಲ ನೀಡಲು ಹಿಂದೇಟು
ದಲಿತ ಮುಖಂಡ ಅಶೋಕ್‌ ಕೊಂಚಾಡಿ ಮಾತನಾಡಿ, ಖಾದಿ ಗ್ರಾಮೋದ್ಯೋಗ ಸಾಲ ಸೌಲಭ್ಯ ನೀಡಲು ಇಲಾಖೆಯಿಂದ ಅಧಿಕೃತ ಪತ್ರ ನೀಡಿದರೂ ಬ್ಯಾಂಕ್‌ನವರು ಸಾಲ ನೀಡಲು ಹಿಂದೇಟು ಹಾಕಿ ಸತಾಯಿಸುತ್ತಿದ್ದಾರೆ. ಇಂತಹ ಬ್ಯಾಂಕ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಡಿಸಿಪಿ ಉತ್ತರಿಸಿದರು. ಸಭೆಯಲ್ಲಿ ಎಸಿಪಿಗಳಾದ ಉದಯ ನಾಯ್ಕ, ವೆಲೆಂಟೈನ್‌ ಡಿ’ಸೋಜಾ, ರಾಮರಾವ್‌ ಉಪಸ್ಥಿತರಿದ್ದರು.

ದೂರು ನೀಡಲು ಹಿಂಜರಿಕೆ 
ದಲಿತ ಮುಖಂಡ ರಘುವೀರ್‌ ಸೂಟರ್‌ಪೇಟೆ ಮಾತನಾಡಿ, ದಲಿತ ಮಹಿಳೆಯರು ಪೊಲೀಸ್‌ ಠಾಣೆಯ ಭಯ ಮತ್ತು ಕಾನೂನು ಮಾಹಿತಿ ಕೊರತೆಯಿಂದ ಅದೆಷ್ಟೋ ಪ್ರಕರಣಗಳ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ದಲಿತ ಕಾಲನಿಗಳಲ್ಲಿ ಮಹಿಳೆಯರಿಗೆ ವಿಶೇಷ ಕಾನೂನು ಮಾಹಿತಿ ಕಾರ್ಯಾಗಾರ ನಡೆಸಬೇಕೆಂದು ಸಲಹೆ ಮಾಡಿದರು.

ಮಾದಕ ವಸ್ತು ಮಾರಾಟ ನಿಯಂತ್ರಿಸಿ
ನಗರದ ಶಾಲಾ ಕಾಲೇಜು ಕ್ಯಾಂಪಸ್‌ ಸಮೀಪ ಸಿಗರೇಟ್‌, ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳುವಂತೆ ರಘುವೀರ್‌ ಆಗ್ರಹಿಸಿದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿಸಿಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next