Advertisement

ಎಂಇಎಸ್‌ ನಾಯಕರಿಗೆ ಕಮಿಷನರ್‌ ತಾಕೀತು

10:38 PM Dec 31, 2019 | Team Udayavani |

ಬೆಳಗಾವಿ: ಗಡಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಸೋಮವಾರ ಕನ್ನಡ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದ ಪೊಲೀಸ್‌ ಕಮಿಷನರ್‌ ಲೋಕೇಶ ಕುಮಾರ, ಮಂಗಳವಾರ ಎಂಇಎಸ್‌ ಮುಖಂಡರನ್ನು ಕರೆಯಿಸಿ “ಬಾಲ ಬಿಚ್ಚಿದರೆ ಕಾನೂನು ಕ್ರಮ’ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಸಮಸ್ಯೆ ತರಬೇಡಿ: ಕಮಿಷನರ್‌ ಲೋಕೇಶ ಕುಮಾರ ಮಾತನಾಡಿ, ಗಡಿ ವಿವಾದ ಕುರಿತು ಕನ್ನಡ ಹಾಗೂ ಮರಾಠಿ ಭಾಷಿಕರ ಮಧ್ಯೆ ಯಾವುದೇ ವೈಷಮ್ಯ ನಡೆಯಬಾರದು. ಸದ್ಯ ಈ ವಿಷಯ ಸುಪ್ರೀಂ ಕೋರ್ಟಿನಲ್ಲಿದ್ದು, ವದಂತಿಗಳ ಆಧಾರದ ಮೇಲೆ ಗಲಾಟೆ ನಡೆಸುತ್ತ ಸಾರ್ವಜನಿಕವಾಗಿ ಸಮಸ್ಯೆ ಯನ್ನುಂಟು ಮಾಡಬಾರದು. ಈಗಾಗಲೇ ವಿವಿಧ ಸಂಘಟನೆಯವರನ್ನು ಕರೆಯಿಸಿ ವಿಷಯ ತಿಳಿಸಲಾಗಿದೆ ಎಂದರು.

ಹತ್ತಿಕ್ಕುವ ಕೆಲಸ: ಮಾಜಿ ಶಾಸಕ ಮನೋಹರ ಕಿಣೇಕರ ಮಾತನಾಡಿ, 64 ವರ್ಷಗಳಿಂದ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ವಾಗಿ ಹೋರಾಟ ನಡೆಸುತ್ತಿದ್ದೇವೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿಲ್ಲ. ಪ್ರಜಾ ಪ್ರಭುತ್ವದಲ್ಲಿ ಹೋರಾಟ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.

ಮೃದು ಧೋರಣೆ ಏಕೆ?: ಎಂಇಎಸ್‌ ಮುಖಂಡ ಪ್ರಕಾಶ ಮರಗಾಳೆ ಮಾತನಾಡಿ, ಕನ್ನಡ ಸಂಘಟನೆಯವರು ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆಸಿ ಹೋರಾಟ ಮಾಡುತ್ತಿದ್ದಾರೆ. ಬೇರೆ ಕಡೆಯಿಂದ ಬಂದವರ ಮೇಲೆ ಪೊಲೀಸರು ಮೃದು ಧೋರಣೆ ತೋರುತ್ತಿರುವುದು ಏಕೆ? ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಮರಾಠಿಗರ ವಿರುದ್ಧ ಅವಹೇಳ ನಾಕಾರಿಯಾಗಿ ಮಾತನಾಡಿದ್ದಾರೆ. ಕನ್ನಡಿಗರು ಹಾಗೂ ಮರಾಠಿಗರನ್ನು ಪ್ರಚೋದಿಸುತ್ತಿದ್ದಾರೆ.

ಹೀಗಾಗಿ ಭೀಮಾಶಂಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸ್‌ ಕಮಿಷನರ್‌ ಲೋಕೇಶಕುಮಾರ ಮಾತನಾಡಿ, ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Advertisement

ಒಂದು ವೇಳೆ ಯಾರಾದರೂ ಕಾನೂನಿನ ವಿರುದ್ಧ ನಡೆದುಕೊಂಡರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿಸಿಪಿ ಸೀಮಾ ಲಾಟ್ಕರ್‌, ಯಶೋಧಾ ವಂಟಗೋಡಿ, ಎಸಿಪಿ ಎನ್‌.ವಿ.ಬರಮನಿ, ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ಮುಖಂಡರಾದ ದೀಪಕ ದಳವಿ, ಪ್ರಕಾಶ ಶಿರೋಳಕರ, ಮಾಲೋಜಿರಾವ ಅಷ್ಟೇಕರ, ಅರವಿಂದ ನಾಗನೂರಿ, ನೇತಾಜಿ ಜಾಧವ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next