ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ನೂತನ ಪೊಲೀಸ್ ಆಯುಕ್ತರಾಗಿ 2007ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಾ| ವೈ.ಎಸ್. ರವಿಕುಮಾರ ಶನಿವಾರ ಅಧಿಕಾರ ವಹಿಸಿಕೊಂಡರು. ಪೊಲೀಸ್ ಆಯುಕ್ತರಾಗಿದ್ದ ಎನ್. ಸತೀಶ ಕುಮಾರ ಅವರನ್ನು ಸರ್ಕಾರ ಬೆಳಗಾವಿ ವಲಯ ಐಜಿಪಿಯಾಗಿ ವರ್ಗಾವಣೆಗೊಳಿಸಿ, ಡಾ| ವೈ. ಎಸ್. ರವಿಕುಮಾರ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು.
ಅಂತೆಯೇ ಡಾ| ರವಿಕುಮಾರ ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ವಿಮಾನ ಮೂಲಕ ನಗರಕ್ಕೆ ಆಗಮಿಸಿದರು. ಪೊಲೀಸ್ ಆಯುಕ್ತಾಲಯದ ಕಚೇರಿಗೆ ತೆರಳಿ ಡಾ| ರವಿಕುಮಾರ ತಮ್ಮ ಅಧಿಕಾರ ವಹಿಸಿಕೊಂಡರು. ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು, ಸಹಾಯಕ ಪೊಲೀಸ್ ಆಯುಕ್ತ ಅಂಶುಕುಮಾರ ಹಾಗೂ ಆಯುಕ್ತಾಲಯದ ಅಧಿಕಾರಿಗಳು, ಸಿಬ್ಬಂದಿ ನೂತನ ಆಯುಕ್ತರಿಗೆ ಶುಭ ಕೋರಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವೆ: ಕೊರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಸರ್ಕಾರ ನನ್ನನ್ನು ನಿಯೋಜಿಸಿದೆ. ಇದೊಂದು ಸವಾಲಿನ ಕೆಲಸವಾಗಿದೆ. ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುವೆ ಎಂದು ಕಾರ್ಯಭಾರ ವಹಿಸಿಕೊಂಡ ಬಳಿಕ ನೂತನ ಆಯುಕ್ತರು ಸುದ್ದಿಗಾರರಿಗೆ ತಿಳಿಸಿದರು. ಕೊರೊನಾ ಸೋಂಕು ಹರಡುವಿಕೆ ತಡೆಯಲು ನಾನು ವೈದ್ಯನಾಗಿ ಜಿಲ್ಲಾಡಳಿತದ ಜತೆಗೆ ಕೈಜೋಡಿಸಿ ಶ್ರಮಿಸುತ್ತೇನೆ.
ಕೊರೊನಾ ನಿಯಂತ್ರಣ ಮತ್ತು ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜನರು ಸಹಕಾರ ನೀಡಬೇಕು. ಲಾಕ್‌ಡೌನ್ ಕುರಿತು ಜಿಲ್ಲಾಡಳಿತ ಮತ್ತು ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ತಕ್ಷಣದಿಂದಲೇ ಶುರು ಮಾಡುವೆ ಎಂದರು. ಇದೇ ಮೊದಲ ಬಾರಿ ಪೊಲೀಸ್ ಆಯುಕ್ತನಾಗಿದ್ದು, ಸಮಾಜಘಾತುಕ ಶಕ್ತಿಗಳನ್ನು ಸಂಪೂರ್ಣ ಮಟ್ಟ ಹಾಕುವ ಮೂಲಕ ಜನರು ನೆಮ್ಮದಿಯಾಗಿ ಇರಲು ಇಡೀ ಪೊಲೀಸ್ ವ್ಯವಸ್ಥೆ ಒಂದಾಗಿ ಕೆಲಸ ಮಾಡಲಿದೆ. ಜನರು ತಮ್ಮ ಸಮಸ್ಯೆಗಳಿದ್ದರೆ ಖುದ್ದಾಗಿ ನನ್ನನ್ನು ಭೇಟಿ ಮಾಡಲಿ.
ಇಲ್ಲವೇ ಮಾಹಿತಿ ನೀಡಿದರೂ, ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು. ಮೊದಲಿನಿಂದಲೂ ನಾನು ಜನರೊಂದಿಗೆ ಬೆರೆಯುವ ವ್ಯಕ್ತಿ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ. ಪೊಲೀಸ್ ಆಯುಕ್ತಾಲಯದಲ್ಲಿ ಸಿಬ್ಬಂದಿ ಕೊರತೆಯಿದೆ. ಹೊಸ ಆಯುಕ್ತಾಲಯ ಆಗಿದ್ದರಿಂದ ಇದೆಲ್ಲವೂ ಸಹಜ. ಈಗಾಗಲೇ ನೇಮಕ ಪ್ರಕ್ರಿಯೆಯನ್ನು ಸರ್ಕಾರ ಶುರು ಮಾಡಿದ್ದರಿಂದ ಕ್ರಮೇಣವಾಗಿ ಸಿಬ್ಬಂದಿ ಕೊರತೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.