Advertisement

ಬಾವುಟದ ವಿಷಯದಲ್ಲಿ ಕಮಿಷನ್ ವ್ಯಾಪಾರ : ಮಾಜಿ ಸಚಿವೆ ಉಮಾಶ್ರೀ

08:39 PM Aug 12, 2022 | Team Udayavani |

ರಬಕವಿ-ಬನಹಟ್ಟಿ: ಯಾವಾಗಲೂ ದೇಶದ ಧ್ವಜವನ್ನು ದ್ವೇಷಿಸುತ್ತಿದ್ದ ಬೆಜೆಪಿಯವರು ಈಗ ಕೈಯಲ್ಲಿ ಧ್ವಜವನ್ನು ಹಿಡಿದುಕೊಂಡು ನಾಟಕವಾಡುತ್ತಿರುವುದು ಜನರಿಗೆ ಗೊತ್ತಾಗುತ್ತದೆ. ರಾಷ್ಟ್ರ ಧ್ವಜದ ವಿಷಯದಲ್ಲೂ ಕಮಿಷನ್ ವ್ಯಾಪಾರ ನಡೆಸುವುದರ ಮೂಲಕ ರಾಷ್ಟ್ರ ಧ್ವಜದ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜಗಳಲ್ಲಿ ಪ್ರಮಾದಗಳನ್ನು ಕಾಣದೆ ಮನ ಬಂದಂತೆ ರಾಷ್ಟ್ರ ಧ್ವಜಗಳನ್ನು ತಯಾರಿಸಲು ಅನುಮತಿ ನೀಡಿರುವುದು ಖಂಡನೀಯವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಕಿಡಿ ಕಾರಿದರು.

Advertisement

ಶುಕ್ರವಾರ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಪಾದಯಾತ್ರೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ‍್ಯದ ಅರ್ಥವನ್ನು ಯುವ ಪೀಳಿಗೆ ಆರ್ಥೈಯಿಸಿಕೊಳ್ಳಬೇಕಿದೆ. ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ಮನವರಿಕೆ ಇಂದಿನ ಯುವಕರಿಗೆ ಆಗಬೇಕಾಗಿದೆ. ಸಮಾನತೆ. ಸಹೋದರ ಭಾಂಧವ್ಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ದೇಶದ ಜನರನ್ನು ಸಶಕ್ತರನ್ನಾಗಿಸಿದ್ದು ಕಾಂಗ್ರೆಸ್. ಬಿಜೆಪಿ ಸರ್ಕಾರ ಹಳೆ ನೀರನ್ನು ಹೊಸ ಬಾಟಲಿಗೆ ಹಾಕಿ ಯೋಜನೆಗಳನ್ನು ತಯಾರು ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಆರ್‌ಎಸ್‌ಎಸ್ ಗೆ ಸ್ವಾತಂತ್ರ‍್ಯ ಹೋರಾಟ ಮತ್ತು ಆಚರಣೆಯ ನೈತಿಕತೆ ಇಲ್ಲವಾಗಿದೆ. ದೇಶದ ಮಹಾತ್ಮನನ್ನು ಕೊಂದ ನಾಥೂರಾಮ ಗೋಡ್ಸೆಯಂತಹ ದ್ರೋಹಿಗಳ ಬಾಯಿಂದ ಘೋಷಣೆಗಳು ಹೇಗೆ ಬರುತ್ತಿವೆ ಎಂಬುದು ತಿಳಿಯುತ್ತಿಲ್ಲ.ಬಿಜೆಪಿ ದೇಶಕ್ಕೆ ಯಾವುದೆ ಮಹತ್ವದ ಯೋಜನೆಗಳನ್ನು ನೀಡದೆ ಕೇವಲ ತೆರಿಗೆಯ ಹೊರೆಯನ್ನು ನೀಡಿದೆ. ದೇಶದ ಪ್ರಾಧಾನಿ ಕೇವಲ ಬಂಡವಾಳಶಾಹಿಗಳ ಪರವಾಗಿದ್ದು, ಜನ ಸಾಮಾನ್ಯರ ವಿರೋಧಿಯಾಗಿದ್ದಾರೆ. ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನಡೆಸುವಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಬಕವಿ, ರಾಮಪುರ ಹಾಗೂ ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಥಾ ನಡೆಸಿದರು.

ಡಾ.ಪದ್ಮಜೀತ ನಾಡಗೌಡಪಾಟೀಲ, ರಾಜು ಭದ್ರನವರ, ಬಸವರಾಜ ಶೇಗಾವಿ, ಸಂಗಮೇಶ ಬಬಲೇಶ್ವರ, ಡಾ.ಎ.ಆರ್.ಬೆಳಗಲಿ, ಡಾ.ಎಂ.ಎಸ್.ದಡ್ಡೆನವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಮೇಶ ಸವದಿ, ಪ್ರಭಾವತಿ ಚಾವಡಿ, ಪ್ರವೀಣ ನಾಡಗೌಡ, ಶಂಕರ ಸೋರಗಾವಿ, ಅಶೋಕ ಆಳಗೊಂಡ, ಮಾಳು ಹಿಪ್ಪರಗಿ, ರಾಹುಲ ಕಲಾಲ ಸೇರಿದಂತೆ ಅನೇಕರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next