ಒಂದೇ ಹಾಡು, ಎರಡು ದೇಶದಲ್ಲಿ ಚಿತ್ರೀಕರಣ…! ಇದು ಅನೀಶ್ ತೇಜೇಶ್ವರ್ ಅಭಿನಯದ “ವಾಸು- ನಾನು ಪಕ್ಕಾ ಕಮರ್ಷಿಯಲ್’ ಚಿತ್ರದ ಲೇಟೆಸ್ಟ್ ಸುದ್ದಿ. ಇಷ್ಟೇ ಆಗಿದ್ದರೆ, ಈ “ವಾಸು’ ಬಗ್ಗೆ ಹೇಳುವ ಅಗತ್ಯವಿರಲಿಲ್ಲ. ಸ್ವೀಡನ್ ಮತ್ತು ನಾರ್ವೆ ದೇಶಗಳಲ್ಲಿ ಚಿತ್ರೀಕರಿಸಿರುವ “ರಂಗೇರಿದೆ..’ ಎಂಬ ಹಾಡಿಗೆ ಪುನೀತ್‌ರಾಜಕುಮಾರ್ ಧ್ವನಿಯಾಗಿದ್ದು ಒಂದು ಸುದ್ದಿಯಾದರೆ, ಆ ರೊಮ್ಯಾಂಟಿಕ್ ಸಾಂಗ್ ಅನ್ನು ಇದೇ ಮೊದಲ ಬಾರಿಗೆ ಸ್ವೀಡನ್ ದೇಶದ “ಕಾರ್ ಗ್ರೇವ್‌ಯಾರ್ಡ್’ ಎಂಬ ಡೇಂಜರಸ್ ಜಾಗದಲ್ಲಿ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ.
ಹೌದು, ವರ್ಲ್ಡ್ವಾರ್ ನಡೆದ ಜಾಗದಲ್ಲಿ ಆ ಹಾಡನ್ನು ಚಿತ್ರೀಕರಿಸಿದ್ದು, ಆ ಸ್ಥಳದಲ್ಲಿ ಡಾಕ್ಯುಮೆಂಟರಿ ಹೊರತುಪಡಿಸಿದರೆ, ಇದುವರೆಗೆ ಅಲ್ಲಿ ಯಾವುದೇ ಸಿನಿಮಾಗಳ ಚಿತ್ರೀಕರಣವಾಗಿಲ್ಲ. ಮೊದಲ ಸಲ ಅದರಲ್ಲೂ ಕನ್ನಡದ “ವಾಸು- ನಾನು ಪಕ್ಕಾ ಕಮರ್ಷಿಯಲ್’ ಚಿತ್ರದ ಹಾಡನ್ನು ಅಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ವಿಶೇಷ. ಆ “ಕಾರ್ ಗ್ರೇವ್‌ಯಾರ್ಡ್’ ವಿಶೇಷತೆ ಅಂದರೆ, ವರ್ಲ್ಡ್ ವಾರ್ ನಡೆದ ಸಮಯದಲ್ಲಿ ಲಕ್ಷಾಂತರ ಕಾರುಗಳು ಅಲ್ಲೇ ಕೆಟ್ಟು ನಿಂತು ಹಾಳಾಗಿವೆ. ಆ ಕಾರುಗಳಲ್ಲೇ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ.
ಒಂದು ರೀತಿಯ ದೆವ್ವಗಳೇ ಓಡಾಡುವ, ಕಿರುಚಾಡುವ ಜಾಗ ಎಂದೇ ಹೇಳಲಾಗುತ್ತದೆ. ಅಂತಹ ಸ್ಥಳದಲ್ಲಿ ರೊಮ್ಯಾಂಟಿಕ್ ಸಾಂಗ್ ಚಿತ್ರೀಕರಿಸಿರುವುದು ವಿಶೇಷ ಎಂಬುದು ನಟ ಅನೀಶ್ ತೇಜೇಶ್ವರ್ ಮಾತು. ಸ್ವೀಡನ್‌ನ ಆ “ಕಾರ್ ಗ್ರೇವ್‌ಯಾರ್ಡ್’ ಜಾಗದಲ್ಲಿ ಚಿತ್ರೀಕರಣ ಮಾಡಲೇಬೇಕು ಅಂತ ಚಿತ್ರತಂಡ ಹೊರಟಾಗ, ಅಲ್ಲಿನ ಸರ್ಕಾರ ಆ ಜಾಗದಲ್ಲೊಂದು ಎಚ್ಚರಿಕೆಯ ಬೋರ್ಡ್ ಹಾಕಿತ್ತಂತೆ. ಆ ಬೋರ್ಡ್‌ನಲ್ಲಿ “ಈ ಜಾಗ ಅಪಾಯ. ಇಲ್ಲಿ ಏನೇ ಆದರೂ ನೀವೇ ಜವಾಬ್ದಾರರು’ ಎಂದು ಬೋರ್ಡ್‌ನಲ್ಲಿ ಬರೆಯಲಾಗಿತ್ತಂತೆ.
ಅಲ್ಲಿದ್ದ ಕೆಲವರು, “ನೀವು ಆ ಜಾಗದಲ್ಲಿ ಹೋಗಿ ಸಮಸ್ಯೆಗೆ ಸಿಲುಕಿ, ಕೂಗಿದರೂ ಯಾರೊಬ್ಬರೂ ಸಹಾಯಕ್ಕೆ ಬರಲ್ಲ’ ಅಂತ ಹೇಳಿದರೂ, ಆ ಅಪರೂಪದ ಜಾಗದಲ್ಲೇ ರೊಮ್ಯಾಂಟಿಕ್ ಸಾಂಗ್ ಚಿತ್ರೀಕರಿಸಬೇಕು ಅಂತ ನಿರ್ಧರಿಸಿ, ಇಡೀ ಚಿತ್ರತಂಡ ಆ ಹಾಡನ್ನು ಒಂದು ದಿನ ಚಿತ್ರೀಕರಿಸಿಕೊಂಡಿದೆ. ಆ ಜಾಗದಲ್ಲಿ ತುಂಬಾ ಹೊತ್ತು ಚಿತ್ರೀಕರಿಸಲು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ಕೊಡದಿದ್ದರಿಂದ, ಸಿಕ್ಕ ಕಡೆಯಲ್ಲೆಲ್ಲಾ ಚಿತ್ರೀಕರಿಸಿರುವುದಾಗಿ ಹೇಳುತ್ತಾರೆ ಅನೀಶ್.
ಇದು ಸ್ವೀಡನ್‌ನ ಅಪರೂಪ ಜಾಗದ ಚಿತ್ರೀಕರಣದ ಕಥೆಯಾದರೆ, ನಾರ್ವೆಯಲ್ಲೂ ಅದೇ ಹಾಡನ್ನು ಚಿತ್ರೀಕರಿಸಲಾಗಿದೆ. “ಟ್ರೋಲ್‌ಟುಂಗ’ ಎಂಬ ಅತೀ ಎತ್ತರದ ಪ್ರವಾಸಿ ತಾಣದಲ್ಲೂ ಚಿತ್ರೀಕರಣ ಮಾಡಿದ್ದು, ಜಗತ್ತಿನ ಅತೀ ಅದ್ಭುತ ತಾಣಗಳ ಪಟ್ಟಿಯಲ್ಲಿ “ಟ್ರೋಲ್‌ಟುಂಗ’ ಸ್ಥಳವೂ ಒಂದು. ಎತ್ತರದಲ್ಲಿರುವ ಕಲ್ಲು ಬಂಡೆ ಮೇಲೆ ಆ ಚಿತ್ರೀಕರಿಸಿದ್ದು ವಿಶೇಷ. ಅದೂ ಸಹ ಡೇಂಜರಸ್ ಜಾಗ ಎನ್ನುವ ಅನೀಶ್, ಈ ಹಾಡಿಗೆ ವಿದ್ಯಾಸಾಗರ್ ನೃತ್ಯ ಸಂಯೋಜಿಸಿದ್ದು, ಹಾಡನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದಾರೆ ಎಂದು ವಿವರ ಕೊಡುತ್ತಾರೆ. ಚಿತ್ರದಲ್ಲಿ ನಿಶ್ವಿಕಾ ನಾಯ್ಡು, ಅವಿನಾಶ್, ಗಿರೀಶ್, ಮಂಜುನಾಥ್ ಹೆಗಡೆ, ಅರುಣ ಬಾಲರಾಜ್, ದೀಪಕ್ ಶೆಟ್ಟಿ ಇತರರು ನಟಿಸಿದ್ದಾರೆ. ಅಜಿತ್ ಉಗ್ಗಿನ್ ವಾಸನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಜನೀಶ್ ನಟನೆ ಜೊತೆಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜುಲೈನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ ಚಿತ್ರತಂಡ.