Advertisement

ವಾಣಿಜ್ಯ ಸಿರಿಗೆ ಅರಮನೆ ಸಜ್ಜು

11:42 AM Jan 14, 2018 | Team Udayavani |

ಬೆಂಗಳೂರು: ಹಿಂದೆಂದಿಗಿಂತಲೂ ವಿಭಿನ್ನವಾಗಿರುವ ಸಾವಯವ ಮೇಳಕ್ಕೆ ಸಿಲಿಕಾನ್‌ ಸಿಟಿ ಸಿದ್ಧವಾಗಿದೆ. ಇದು ಬರೀ ಮೇಳವಲ್ಲ, ಇಲ್ಲಿ ಸಿರಿಧಾನ್ಯಗಳ ಮಾರಾಟ, ಖರೀದಿ, ಆಹಾರ-ವಿಹಾರ ಎಲ್ಲವೂ ಇರಲಿದೆ. ಅಂದಹಾಗೆ “ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ’ಕ್ಕೆ ವೇದಿಕೆಯಾಗಲಿರುವುದು ಬೆಂಗಳೂರು ಅರಮನೆ ಪ್ರಾಂಗಣ.

Advertisement

ಜ.19ರಿಂದ 21ರವರೆಗೆ ನಡೆಯುವ ವಾಣಿಜ್ಯ ಮೇಳದಲ್ಲಿ ಸುಮಾರು 350 ಮಳಿಗೆಗಳು ತಲೆಯೆತ್ತಲಿವೆ. ಈ ಪೈಕಿ 250 ಕಂಪನಿಗಳು ಪ್ರದರ್ಶಕರಾದರೆ, ನೂರು ಕಂಪನಿಗಳು ಖರೀದಿದಾರರಾಗಿ ಭಾಗವಹಿಸಲಿವೆ. ಉತ್ಪಾದಕರು, ಉದ್ಯಮಿಗಳು ಮತ್ತು ಗ್ರಾಹಕರನ್ನು ಒಂದೇ ಸೂರಿನಡಿ ತಂದು, ಪರಸ್ಪರ ಸಂಪರ್ಕಿಸುವುದು, ಸಾರ್ವಜನಿಕರಿಗೆ ಆರೋಗ್ಯದಾಯಕ ಜೀವನಶೈಲಿ ಅರಿವು ಮೂಡಿಸುವುದು ಮೇಳದ‌ ಉದ್ದೇಶ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇಳದಲ್ಲಿ ಸಾವಯವ, ಸಿರಿಧಾನ್ಯಗಳ ಮಾರಾಟ, ಸಾಂಪ್ರದಾಯಿಕ ಆಹಾರ ತಯಾರಿಕೆ ಕೂಡ ನಡೆಯಲಿದ್ದು, ವಿಶೇಷ ಖಾದ್ಯಗಳು ಬಾಯಲ್ಲಿ ನೀರೂರಿಸಲಿವೆ. ಅಮೆರಿಕ, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್‌, ದಕ್ಷಿಣ ಕೊರಿಯ, ಯುಎಇ, ಉಗಾಂಡ, ಚೀನಾ, ಮಲೇಷಿಯ ಸೇರಿದಂತೆ ವಿವಿಧ ದೇಶಗಳಿಂದ ಉದ್ಯಮಿಗಳು ಆಗಮಿಲಿಸದ್ದಾರೆ. ಬಿಗ್‌ ಬಾಸ್ಕೆಟ್‌, ಐಟಿಸಿ ಫ‌ುಡ್‌, ಫ್ಲಿಪ್‌ಕಾರ್ಟ್‌, ಅಮೇಝಾನ್‌, ಎಂಟಿಆರ್‌, ಮಯಾಸ್‌ ಸೇರಿದಂತೆ 20ಕ್ಕೂ ಅಧಿಕ ಪ್ರಮುಖ ಆಹಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, ನೇರ ಮಾರುಕಟ್ಟೆಯ ಕೊಂಡಿ ಆಗಲಿದೆ ಎಂದು ಹೇಳಿದರು. 

10 ಸಾವಿರ ರೈತರು ಭಾಗಿ: ಮೇಳದಲ್ಲಿ 10 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಲಿದ್ದು, 25 ಸಂಶೋಧಕರು ಮತ್ತು ನೀತಿ ನಿರೂಪಕರು ಎರಡು ಪರ್ಯಾಯ ವಿಚಾರಸಂಕಿರಣಗಳಲ್ಲಿ ವ್ಯಾಪಾರ, ವೈಜ್ಞಾನಿಕ ವಿಚಾರಗಳ ಕುರಿತು ಚರ್ಚಿಸುತ್ತಾರೆ. ಈ ಮೂರು ದಿನ 63 ಸಂವಾದಗಳು, ಉಪನ್ಯಾಸಗಳು, ರೈತರಿಗಾಗಿ ಪ್ರತ್ಯೇಕ ಕಾರ್ಯಾಗಾರ ನಡೆಯಲಿದೆ.

ತಾಜ್‌, ಒಬೇರಾಯ್‌ ರೀತಿಯ ಪ್ರತಿಷ್ಠಿತ ಹೋಟೆಲ್‌ಗ‌ಳ ಬಾಣಸಿಗರು ತಯಾರಿಸಿದ ಸಿರಿಧಾನ್ಯ ಮತ್ತು ಸಾವಯವ ಆಹಾರವನ್ನೂ ಇಲ್ಲಿ ಸವಿಯಬಹುದು. ಹಾಗೇ ಅಡುಗೆ, ಪೋಸ್ಟರ್‌ ತಯಾರಿ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಕೂಡ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳದ ಮೆರುಗು ಹೆಚ್ಚಿಸಲಿವೆ ಎಂದು ಸಚಿವರು ತಿಳಿಸಿದರು. 

Advertisement

19ರ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಮೇಳಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ವಸ್ತು ಪ್ರದರ್ಶನ ಉದ್ಘಾಟಿಸುವರು. ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್‌, ಹರ್‌ಸಿಮ್ರತ್‌ ಕೌರ್‌ ಬಾದಲ್‌, ರಾಜ್ಯ ಸಚಿವರಾದ ಕೆ.ಜೆ.ಜಾರ್ಜ್‌, ಎಸ್‌.ಎಸ್‌.ಮಲ್ಲಿಕಾರ್ಜುನ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 21ರಂದು ಸಮಾರೋಪ ಸಮಾರಂಭದಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಸಿರಿಧಾನ್ಯದಿಂದ ಅಧಿಕ ಲಾಭ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾದೇಶಿಕ ಸಹಕಾರ ಸಾವಯವ ರೈತರ ಸಂಘದ ಅಧ್ಯಕ್ಷ ಟಿ.ಕೃಪ ಮಾತನಾಡಿ, ಈ ಮೊದಲು ಸಾವಯವ ಮತ್ತು ಸಿರಿಧಾನ್ಯ ಬೆಳೆದರೂ ಮಾರುಕಟ್ಟೆ ಸಿಗದೆ, ರಾಸಾಯನಿಕವಾಗಿ ಬೆಳೆದ ಬೆಳೆಗಳ ಮಾರುಕಟ್ಟೆಗೇ ಸಾಗಿಸಬೇಕಿತ್ತು. ಈಗ ಧಾನ್ಯಗಳನ್ನು ರೈತರೇ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದೆಲ್ಲವೂ ಸಿರಿಧಾನ್ಯ ಮೇಳದಿಂದ ಸಾಧ್ಯವಾಗಿದೆ ಎಂದರು.

ಸಿರಿಧಾನ್ಯಗಳ ಕಥೆ!: ಸಿರಿಧಾನ್ಯಗಳ ಇತಿಹಾಸ ಒಳಗೊಂಡ “ಸ್ಟೋರಿ ಆಫ್ ಮಿಲೆಟ್ಸ್‌’ ಪುಸ್ತಕ ಮತ್ತು ಪ್ರದರ್ಶಕರ ಕ್ಯಾಟಲಾಗ್‌ ಅನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು. ಸಾವಯವ ಮತ್ತು ಸಿರಿಧಾನ್ಯಗಳ ರೈತರ 14 ಒಕ್ಕೂಟಗಳು, ನಬಾರ್ಡ್‌, ಅಪೆಡಾ ಸಂಸ್ಥೆಗಳು ಕೂಡ ಮಳಿಗೆಗಳನ್ನು ಹಾಕಲು ಮುಂದೆಬಂದಿವೆ ಎಂದು ಕೃಷಿ ಇಲಾಖೆ ಆಯುಕ್ತ ಜಿ. ಸತೀಶ್‌ ಮಾಹಿತಿ ನೀಡಿದರು.

ಸಾವಯವ ಕೃಷಿ, ರಫ್ತು, ಬ್ರಾಂಡಿಂಗ್‌, ರಿಟೇಲ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಇದೇ ಮೊದಲ ಬಾರಿ ಜೈವಿಕ್‌ ಇಂಡಿಯನ್‌ ರಾಷ್ಟ್ರಮಟ್ಟದ ಪ್ರಶಸ್ತಿ ನೀಡುತ್ತಿರುವುದಾಗಿ ಇಂಟರ್‌ನ್ಯಾಷನಲ್‌ ಕಾಂಪಿಟೆನ್ಸ್‌ ಸೆಂಟರ್‌ ಫಾರ್‌ ಆಗ್ಯಾìನಿಕ್‌ ಅಗ್ರಿಕಲ್ಚರ್‌ ಸಿಇಒ ಮನೋಜ್‌ ಮೆನನ್‌,ತಿಳಿಸಿದರು.

ಪಾನಪ್ರಿಯರಿಗಾಗಿ ಸಿರಿಧಾನ್ಯಗಳ ಬಿಯರ್‌!: ಸಿರಿಧಾನ್ಯಗಳ ಸೂಪ್‌, ಐಸ್‌ಕ್ರೀಂ ಆಯ್ತು. ಈಗ ಸಿರಿಧಾನ್ಯಗಳಿಂದ ತಯಾರಿಸಿದ ಬಿಯರ್‌ ಕೂಡ ಬರುತ್ತಿದೆ! ಈ ಬಿಯರ್‌ ಅನ್ನು ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳದಲ್ಲಿ ನೀವು ಸವಿಯಬಹುದು.

ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ನ್ಯೂಟ್ರಾಸುಟಿಕಲ್‌ ಸಂಶೋಧನಾ ಕೇಂದ್ರ ಇದನ್ನು ಪರಿಚಯಿಸುತ್ತಿದೆ. ಬೆಲ್ಲ ಮತ್ತಿತರ ಸಿರಿಧಾನ್ಯಗಳಿಂದ “ನಮ್ಮ ಬಿಯರ್‌’ ತಯಾರಿಸಲಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈ ಪ್ರಯೋಗ ನಡೆಯುತ್ತಿದೆ. ಆದರೆ ಇದರಲ್ಲಿರುವ ಸಾವಯವ ಮತ್ತು ಸಿರಿಧಾನ್ಯಗಳ ಪ್ರಮಾಣ ಶೇ.30 ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next