Advertisement

Udayavani Special: ಇದು ಬೆಕ್ಕಿನ ಬಿಡಾರವಲ್ಲ; ಮಹಲು!

12:17 AM Oct 18, 2024 | Team Udayavani |

ಮಡಂತ್ಯಾರು: ಇದು ಅಕ್ಷರಶಃ ಬೆಕ್ಕುಗಳ ಅರಮನೆ. ಈ ಮನೆಯಲ್ಲಿರುವುದು ಮೂವರು ಮಾತ್ರ. ಗಂಡ, ಹೆಂಡತಿ ಮತ್ತು ವೃದ್ಧ ಅಮ್ಮ. ಉಳಿದಂತೆ 150ಕ್ಕೂ ಅಧಿಕ ಬೆಕ್ಕುಗಳು! ಇದು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ರಾಜೇಶ್‌ ಗೌಡ ಮತ್ತು ಸೀತಮ್ಮ ದಂಪತಿಯ ಮನೆ. 2002ರಲ್ಲಿ ಮದುವೆಯಾದ ಇವರಿಗೆ ಮಕ್ಕಳಿಲ್ಲದಿದ್ದರೂ ಈ ಬೆಕ್ಕುಗಳನ್ನೇ ಮಕ್ಕಳಂತೆ ಪ್ರೀತಿಸುತ್ತಾರೆ.

Advertisement

11 ವರ್ಷಗಳ ಹಿಂದೆ ಬಂದ ಚೋಮು!
ಈ ಮನೆಗೆ 11 ವರ್ಷಗಳ ಹಿಂದೆ ಬಂದ ಹೆಣ್ಣು ಬೆಕ್ಕು ಚೋಮುವಿಗೆ, ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಾಗಿ ಸಂಸಾರ ಇಷ್ಟೊಂದು ದೊಡ್ಡದಾಗಿ ಬೆಳೆದಿದೆ, ಬೆಳೆಯುತ್ತಿದೆ.

ದಂಪತಿ ಶ್ರೀಮಂತರೇನಲ್ಲ
ಹಾಗಂತ, ಇಷ್ಟೊಂದು ಬೆಕ್ಕುಗಳನ್ನು ಮನೆಯಲ್ಲಿ ಸಾಕುವ ದಂಪತಿ ಶ್ರೀಮಂತರಲ್ಲ. ಸಣ್ಣ ಮನೆ, ಪಕ್ಕದಲ್ಲಿ ಸಣ್ಣದೊಂದು ತೋಟ. ಅಡಿಕೆ, ತೆಂಗು ಹಾಗೂ ವೀಳ್ಯದೆಲೆ ಕೃಷಿ ಇದೆ. ಹಟ್ಟಿಯಲ್ಲಿ 2 ದನ, 2 ಕರುಗಳನ್ನು ಸಾಕುತ್ತಿದ್ದಾರೆ. ಇದರ ಆದಾಯದಿಂದಲೇ ಇವರ ಜೀವನ. ಆದರೆ ಈ ಬೆಕ್ಕಿನ ಮರಿಗಳಿಗೆ ಮಾತ್ರ ಏನೂ ಕಡಿಮೆ ಮಾಡುವುದಿಲ್ಲ! ಸಹೃದಯರು, ಪ್ರಾಣಿಪ್ರೇಮಿಗಳು ಬೆಂಬಲವಾಗಿ ನಿಂತರೆ ಈ ದಂಪತಿಯ ಉತ್ಸಾಹ ಇಮ್ಮಡಿಸೀತು.

ಕೆಲವು ಬೆಕ್ಕುಗಳು ಶುದ್ಧ ಸಸ್ಯಾಹಾರಿ!
ರಾಜೇಶ್‌ ಗೌಡ ದಂಪತಿ ಈ ಬೆಕ್ಕುಗಳಿಗೆ ಅನ್ನ, ಕೋಳಿ ಮಾಂಸ, ಆಮ್ಲೆàಟ್‌, ಬೇಕರಿ ತಿಂಡಿಗಳು ಹೀಗೆ ಬಗೆ ಬಗೆಯ ಆಹಾರ ನೀಡುತ್ತಾರೆ. ಈ ಬೆಕ್ಕುಗಳ ಒಂದು ದಿನದ ಆಹಾರದ ಖರ್ಚು ಕನಿಷ್ಠ 250 ರೂ.ನಿಂದ 350 ರೂ.! ಅಚ್ಚರಿ ಎಂದರೆ, ಇಲ್ಲಿರುವ ಕೆಲವು ಬೆಕ್ಕುಗಳು ಮಾಂಸವನ್ನು ಮುಟ್ಟುವುದೇ ಇಲ್ಲವಂತೆ. ಅವುಗಳಿಗೆ ಹಾಲು, ಅನ್ನ, ಮೊಸರು, ಬೇಕರಿ ಐಟಂ ಮಾತ್ರ. ಮೊಟ್ಟೆಯೂ ವಜ್ಯì!

Advertisement

ಮಧ್ಯಾಹ್ನ ಮತ್ತು ಸಂಜೆ ಸಮೀಪದ ಬೆಳಾಲು ಪೇಟೆಯ ಹೊಟೇಲ್‌, ಬೇಕರಿ, ಕೋಳಿ ಅಂಗಡಿಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ರಾಜೇಶ್‌ ಗೌಡರು ತರುತ್ತಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಗೌಡರ ದ್ವಿಚಕ್ರ ವಾಹನದ ಶಬ್ದ ಕೇಳಿದ ಕೂಡಲೇ ಬೆಕ್ಕುಗಳೆಲ್ಲ ತಿಂಡಿ ಹಾಕುವ ಮಾಮೂಲಿ ಜಾಗದತ್ತ ಓಡಿ ಬರುವ ದೃಶ್ಯವೇ ಸುಂದರ!

ಬೆಕ್ಕುಗಳಿಗಾಗಿ ಬಂದಿದೆ ಹೊಸ ಗೂಡು
ಬೆಕ್ಕುಗಳಿಗೂ ಒಂದು ವ್ಯವಸ್ಥಿತವಾದ ಜಾಗ ಬೇಕು ಎನ್ನುವ ಆಸೆಯಿಂದ ರಾಜೇಶ್‌ ಗೌಡ ದಂಪತಿ ಒಂದು ಗೂಡು ನಿರ್ಮಿಸಿದ್ದಾರೆ. ಅದರಲ್ಲಿ ನೀರಿನ ವ್ಯವಸ್ಥೆ, ಮಲಗಲು ಜಾಗವಿದೆ. ನಿತ್ಯ ಅದನ್ನು ತೊಳೆಯಲು ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಆ ಚೋಮು ಹೋಗಿ ಈ ಚೋಮು ಬಂದಳು!
ರಾಜೇಶ್‌ ಗೌಡ ದಂಪತಿ ಬೆಕ್ಕು ಸಾಕಲು ಆರಂಭಿಸಿದ್ದರ ಹಿಂದೆಯೂ ಕಥೆ ಇದೆ. ಕೆಲವು ವರ್ಷಗಳ ಹಿಂದೆ ಅವರು ಒಂದು ಎಮ್ಮೆಯನ್ನು ಸಾಕುತ್ತಿದ್ದರು. ಅದರ ಹೆಸರು ಚೋಮು. ಕಾರಣಾಂತರಗಳಿಂದ ಅದನ್ನು ಮಾರಿದಾಗ ಮನೆಯಲ್ಲಿ ಭಾರೀ ಬೇಸರ. ಅದನ್ನು ಕಳೆಯಲೆಂದು ಒಂದು ಬೆಕ್ಕನ್ನು ತಂದರು. ಅದಕ್ಕೂ ಚೋಮು ಎಂದೇ ಹೆಸರಿಟ್ಟರು.

ಇದು ಬೆಕ್ಕುಗಳ ಆಶ್ರಮವೂ ಹೌದು!
ಈ ಬೆಕ್ಕುಗಳ ಅರಮನೆಗೆ ಕೆಲವರು ಬೆಕ್ಕನ್ನು ತಂದು ಬಿಡುವುದೂ ಇದೆ. ಆದರೆ ಇರುವುದೇ ಹೆಚ್ಚಾಗಿದೆ. ಅವುಗಳನ್ನು ಸಾಕಲು ನಮ್ಮಲ್ಲಿ ಹಣ ಇಲ್ಲ ಎನ್ನುತ್ತಾರೆ ದಂಪತಿ. ಹಾಗಂತ, ರಸ್ತೆ ಬದಿಯಲ್ಲಿ ಕಷ್ಟದಲ್ಲಿ ಸಿಲುಕಿದ ಮರಿಗಳನ್ನು ಇವರೇ ತರುತ್ತಾರೆ. ಇತ್ತೀಚೆಗೆ ವರ್ಗಾವಣೆಯಾಗಿ ಹೋದ ಕುಟುಂಬವೊಂದು ಅನಿವಾರ್ಯವಾಗಿ ಬೆಕ್ಕನ್ನು ಇಲ್ಲಿ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದನ್ನು ಇವರು ನೆನಪಿಸಿಕೊಳ್ಳುತ್ತಾರೆ.

ಒಂದೇ ಒಂದು ಬೆಕ್ಕೂ ಕೊಟ್ಟಿಲ್ಲ!
ಈ ಮನೆಯಲ್ಲಿ ಹುಟ್ಟಿ ಬೆಳೆದ ಯಾವೊಂದು ಬೆಕ್ಕಿನ ಮರಿಯನ್ನೂ ಬೇರೆಯವರಿಗೆ ನೀಡಿಲ್ಲ ಈ ದಂಪತಿ. ನಮ್ಮ ಮನೆಯಲ್ಲಿ ಹುಟ್ಟಿದ ಮರಿಗಳು ಇಲ್ಲೇ ಆಡಿಕೊಂಡಿರಬೇಕು ಎನ್ನುವುದು ದಂಪತಿ ಆಶಯ. ಮನೆಯ ಪರಿಸರಲ್ಲಿ ನಾಯಿಗಳಿವೆಯಾದರೂ ಅವುಗಳ ಜತೆಗೂ ಬೆಕ್ಕುಗಳು ಸ್ನೇಹ ಬೆಳೆಸಿವೆ. ಅಚ್ಚರಿ ಎಂದರೆ, ಮನೆಯೊಳಗೆ ಕೆಲವೊಮ್ಮೆ ಬೆಕ್ಕುಗಳ ಜತೆಗೆ ಹೆಗ್ಗಣಗಳೂ ಓಡಾಡುತ್ತವಂತೆ!

ಮನೆಯ ಎದುರಿನ ರಸ್ತೆಯಲ್ಲಿ ಸಾಗುವ ವಾಹನಗಳ ಅಡಿಗೆ ಬಿದ್ದು ಕೆಲವು ಬೆಕ್ಕುಗಳು ಸತ್ತಿರುವುದು, ರಾತ್ರಿ ವೇಳೆ ಹೊರಗಿನ ಗಂಡು ಬೆಕ್ಕು ಬಂದು ಮರಿಗಳನ್ನು ಕೊಂದಿರುವ ಕಥೆ ಹೇಳುತ್ತಾ ದಂಪತಿ ಕಣ್ಣೀರಾಗುತ್ತಾರೆ!

ಕೆ.ಎನ್‌. ಗೌಡ ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next