Advertisement

ವಾಣಿಜ್ಯ ಮಳಿಗೆ ನಿರ್ಮಾಣ-ಭಾರೀ ಚರ್ಚೆ

03:43 PM Aug 07, 2020 | Suhan S |

ಮಸ್ಕಿ: ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಪುರಸಭೆ ಆಡಳಿತಾಧಿಕಾರಿ, ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅಧ್ಯಕ್ಷತೆಯಲ್ಲಿ ಪುರಸಭೆ ತುರ್ತು ಸಭೆ ನಡೆಯಿತು.

Advertisement

ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಪುರಸಭೆ ಕಟ್ಟಡದ ಕೆಳ ಮಹಡಿಯ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕೋ? ಅಥವಾ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿಕೊಂಡು ಪುರಸಭೆಗೆ ಶಾಶ್ವತ ಆದಾಯ ವೃದ್ಧಿಸಿಕೊಳ್ಳಬೇಕೋ?ಎನ್ನುವ ಕುರಿತು ಸದಸ್ಯರ ನಡುವೆ ಪರ, ವಿರೋಧ ಚರ್ಚೆಗಳು ಕಾವೇರಿತು. ಎಸ್‌ಎಫ್‌ಸಿ ಅನುದಾನದಲ್ಲಿ 85 ಲಕ್ಷ ರೂ. ಹಣವನ್ನು ಪುರಸಭೆಯ ಹಳೆ ಮಳಿಗೆಗಳನ್ನು ತೆರವು ಮಾಡಿ ಹೊಸದಾಗಿ ನಿರ್ಮಿಸುವುದು. ಹೊಸ ಕಟ್ಟಡದ ಕೆಳಭಾಗದಲ್ಲಿ ಹೆಚ್ಚುವರಿ ಮಳಿಗೆ ನಿರ್ಮಾಣಕ್ಕೆ ಅವಕಾಶವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಈ ಬಗ್ಗೆ ಸದಸ್ಯರಿಂದ ಭಿನ್ನ ಅಭಿಪ್ರಾಯಗಳು ಕೇಳಿ ಬಂದವು. ಆರನೇ ವಾರ್ಡ್‌ ಸದಸ್ಯ ಎಂ.ಅಮರೇಶ ಮಾತನಾಡಿ ಹೊಸ ಪುರಸಭೆ ಕಟ್ಟಡದ ಸುತ್ತಲೂ ಖಾಸಗಿ ಆಸ್ಪತ್ರೆಗಳು, ಖಾಸಗಿ ಮಳಿಗೆಗಳೂ ಇವೆ ಇಲ್ಲಿ ಪಾರ್ಕಿಂಗ್‌ ಸಮಸ್ಯೆ ಇದ್ದು, ಕಚೇರಿಗೆ ಬರುವವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಯೇ ಮಳಿಗೆ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾಪಿಸಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಮೌನೇಶ ಮುರಾರಿ, ನೀಲಕಂಠಪ್ಪ ಸೇರಿ ಇತರ ಸದಸ್ಯರು ಸರಕಾರಿ ಜಾಗೆ ಒತ್ತುವರಿ ಮಾಡಿ ಇಲ್ಲಿ ಖಾಸಗಿ ಮಳಿಗೆ ಮಾಡಿಕೊಳ್ಳಲಾಗಿದೆ. ಆದರೆ ಈಗ ಪುನಃ ಇವರಿಗೆ ಜಾಗೆ ಬಿಟ್ಟು ಒಳಗಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದು ಎಷ್ಟು ಸರಿ? ಒತ್ತುವರಿದಾರರನ್ನು ತೆರವು ಮಾಡಿ ಪಾರ್ಕಿಂಗ್‌ಗೆ ಅನುಕೂಲ ಮಾಡಿಕೊಳ್ಳಬೇಕು. ಉಳಿಯುವ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಪುರಸಭೆಗೆ ಆದಾಯ ಸೃಷ್ಟಿಸಿಕೊಳ್ಳಬೇಕು ಎಂದರು.

ಹೊಸ ಕೆರೆ ನಿರ್ಮಿಸಿ: ಗಾಂಧಿ  ನಗರದಲ್ಲಿ ನಾಲ್ಕು ವಾರ್ಡ್‌ಗಳು ಬರುತ್ತಿದ್ದು, ಇಲ್ಲಿ ನೀರಿನ ಸಮಸ್ಯೆ ತೀವ್ರವಿದೆ. 8 ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಕೆಲವೊಮ್ಮೆ ಉಪ್ಪು ನೀರು ಮಿಶ್ರಣ ಮಾಡಿ ನೀರು ಬಿಡಲಾಗುತ್ತಿದೆ. ಹೀಗಾಗಿ ಹಳ್ಳ ದಾಟಿ ಈ ಭಾಗದಲ್ಲಿ ಪ್ರತ್ಯೇಕ ಕೆರೆ ನಿರ್ಮಿಸಬೇಕು ಎಂದು ಸದಸ್ಯರಾದ ನೀಲಕಂಠಪ್ಪ ಭಜಂತ್ರಿ, ರಂಗಪ್ಪ ಅರಿಕೇರಿ ಒತ್ತಾಯಿಸಿದರು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಂದ ಸ್ಥಾನಿಕ ಪರಿಶೀಲಿಸಿ ವರದಿ ಪಡೆದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ರಸ್ತೆ ನಿರ್ಮಿಸಿ: 17ನೇ ವಾರ್ಡನಲ್ಲಿ ಮಳೆ ಬಂದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಕ್ಷಣವೇ ಪರಿಹರಿಸುವಂತೆ ಸದಸ್ಯೆ ರೇಣುಕಾ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರು ಸ್ಮಶಾನದ ಅಭಿವೃದ್ಧಿಗೆ 11 ಲಕ್ಷ ರೂ. ಮಂಜೂರಾಗಿರುವುದನ್ನು ಕಾಂಪೌಂಡ್‌ ಇತರೆ ಕೆಲಸಗಳಿಗೆ ಬಳಸದೇ ಸದ್ಯ 18ನೇ ವಾರ್ಡ್‌ನಲ್ಲಿರುವ ಸ್ಮಶಾನಕ್ಕೆ ತೆರಳಲು ಜಾಗವಿಲ್ಲ. ಕೂಡಲೇ ಈ ಮಾರ್ಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಮಾಜಿ ಉಪಾಧ್ಯಕ್ಷ ರವಿಕುಮಾರ ಪಾಟೀಲ್‌, ಸದಸ್ಯರಾದ ಎಂ ಅಮರೇಶ, ಮಹಾಂತೇಶ ಹೂವಿನಬಾವಿ, ಕವಿತಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next