Advertisement

‌ಕರಾವಳಿಯಲ್ಲಿ ಮತ್ತೆ ವಾಣಿಜ್ಯ ಬಂದರು ನಿರ್ಮಾಣದ ಸದ್ದು!

06:11 PM Jun 27, 2021 | Team Udayavani |

ಜೀಯು, ಹೊನ್ನಾವರ

Advertisement

ಹೊನ್ನಾವರ: ಕರಾವಳಿಯಲ್ಲಿ ಮತ್ತೆ ಸುದ್ದಿ ಮಾಡಿರುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಈಗಿನದ್ದಲ್ಲ. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಿದ್ದಾಗ ಮೀನುಗಾರಿಕಾ ಮತ್ತು ಬಂದರು ಇಲಾಖೆ ಸಚಿವ ಕೃಷ್ಣ ಪಾಲೇಮಾರ್‌ ಈ ಯೋಜನೆಗೆ ಮಂಜೂರಾತಿ ನೀಡಿದ್ದರು. ಇದಕ್ಕಾಗಿ ಮೀನುಗಾರಿಕಾ ಬಂದರಿನ ಪಕ್ಕದಲ್ಲಿರುವ ಅಳವೆ ಬಳಿ ಹೊಸದಾಗಿ ನಿರ್ಮಾಣಕ್ಕಾಗಿ 100 ಎಕರೆ ಭೂಮಿಯನ್ನು ಆಂಧ್ರದವರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು.

ತೈಲ ಮೊದಲಾದ ವಸ್ತುಗಳ ಆಯಾತ, ನಿರ್ಯಾತಕ್ಕೆ ಸರ್ವಋತು ಬಂದರಾಗಿ ಇದು ರೂಪುಗೊಳ್ಳಲು ಸಿದ್ಧತೆ ನಡೆಸಿತ್ತು. ಈಗ ವಾಣಿಜ್ಯ ಬಂದರು ನಿರ್ಮಾಣವಾಗುತ್ತಿರುವ ಸ್ಥಳವನ್ನು ಬಂದರು ಇಲಾಖೆ ಗುತ್ತಿಗೆ ನೀಡಿದೆ. ಈ ಸ್ಥಳಕ್ಕೆ ಹೋಗಲು ಕಡಲ ತಡಿಯಿಂದ ರಸ್ತೆ ನಿರ್ಮಾಣವಾಗಬೇಕಿದೆ. ಈ ರಸ್ತೆಗಾಗಿ ಸಾಗರಮಾಲಾ ಯೋಜನೆಯಡಿ 100ಕೋಟಿ ರೂ. ಮಂಜೂರಾಗಿದೆ. ಬಂದರು ಕಂಪನಿಗೆ ಅಳವೆಯಲ್ಲಿ ಬ್ಯಾಕ್‌ವಾಟರ್‌ ತಡೆಗೋಡೆ ನಿರ್ಮಾಣವನ್ನು ವಹಿಸಿಕೊಡಲಾಗಿದ್ದು ಕಾಲಕಾಲಕ್ಕೆ ಅಳವೆಯಲ್ಲಿ ಹೂಳೆತ್ತುವ, ನಿರ್ವಹಿಸುವ ಜವಾಬ್ದಾರಿ ಸಹ ವಹಿಸಲಾಗಿದೆ. ಹೂಳೆತ್ತಬೇಕೆಂಬುದು ಮೀನುಗಾರರ ಬಹುದಿನದ ಬೇಡಿಕೆಯೂ ಆಗಿತ್ತು. ಈ ಕೆಲಸಕ್ಕೆ ಮೀನುಗಾರಿಕಾ ಬಂದರಿನ ರಸ್ತೆ ಬಳಸಿದಾಗ ಹಾಳಾದ ಕಾರಣ ಮೀನುಗಾರರು ವಿರೋಧಿಸಿದ್ದರು.

ಅಳವೆ ಬ್ಯಾಕ್‌ವಾಟರ್‌ ನಿರ್ಮಾಣಕ್ಕೆ ಭಾರೀ ಕಲ್ಲುಗಳನ್ನು ಒಯ್ಯಬೇಕಾಗಿರುವುದರಿಂದ ಕಂಪನಿ ಹೊಸ ರಸ್ತೆ ನಿರ್ಮಾಣಕ್ಕೆ ತೊಡಗಿಕೊಂಡಾಗ ಕೆಲವು ಮೀನುಗಾರರು ತಮ್ಮ ಆಸ್ತಿ ಹೋಗುತ್ತದೆ ಎಂದು ಪ್ರತಿಭಟನೆ ನಡೆಸಿದರು. ಗುತ್ತಿಗೆ ಕಂಪನಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ನಂತರ ರಾಜ್ಯದ ಆಡಳಿತ ಕಾಂಗ್ರೆಸ್‌ ಕೈಗೆ ಬಂತು. ಆಗ ಮಂಕಾಳು ವೈದ್ಯ ಶಾಸಕರಾಗಿದ್ದರು. ಆ ಅವಧಿಯಲ್ಲಿ ಬಂದರು ಕಂಪನಿ ಜಾಗವನ್ನು ತನ್ನ ವಶಕ್ಕೆ ತೆಗೆದುಕೊಂಡು ಕಾಂಪೌಂಡ್‌ ಹಾಕಿತು. ಬಂದರು ಯೋಜನೆಯಿಂದ ಮೀನುಗಾರಿಕೆ ಹಾಳಾಗುತ್ತದೆ ಎಂಬ ಕಾರಣ ಮುಂದೊಡ್ಡಿ ಮೀನುಗಾರರು ಪ್ರತಿಭಟನೆ ನಡೆಸಿದರು.

ಕಾಮಗಾರಿ ಸ್ಥಗಿತವಾಗಿತ್ತು, ನ್ಯಾಯಾಲಯದ ವ್ಯವಹಾರವೂ ನಡೆಯಿತು. ನಂತರ ಪುನಃ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ದೇಶದ ಕರಾವಳಿಯಲ್ಲಿ ವಾಣಿಜ್ಯ ಬಂದರುಗಳ ನಿರ್ಮಾಣ ಮತ್ತು ಅದಕ್ಕೆ ಪೂರಕವಾದ ಸಾಗರಮಾಲಾ ಸಂಪರ್ಕ ಯೋಜನೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಆದ್ಯತೆ ನೀಡಿದವು. ಗುತ್ತಿಗೆದಾರ ಕಂಪನಿ ಬೇಸಿಗೆಯಲ್ಲಿ ಕೆಲಸ ಆರಂಭಿಸಿತ್ತು. ಆಗ ಅರಣ್ಯ ಇಲಾಖೆ ಪರವಾನಗಿ ಇಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಲಯದ ತಡೆಯಾಜ್ಞೆ ದೊರಕಿತ್ತು. ಈಗ ಪುನಃ ಕೆಲಸ ಆರಂಭಿಸಿದಾಗ ಮೀನುಗಾರರು ಯೋಜನೆಯೇ ಬೇಡ, ಮೀನುಗಾರಿಕಾ ವ್ಯವಹಾರ ಹಾಳಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದಾರೆ.

Advertisement

ಮೀನುಗಾರರು ಬಂದರು ಬೇಡ ಎಂಬುದಕ್ಕೆ ಅವರದ್ದಾದ ಕಾರಣಗಳನ್ನು ಹೇಳುತ್ತಿದ್ದಾರೆ. ಕಂಪನಿ ಮೀನುಗಾರಿಕೆಗೆ ಅಂತಹ ಯಾವ ತೊಂದರೆಯೂ ಆಗುವುದಿಲ್ಲ ಎಂದು ಹೇಳುತ್ತಿದೆ. ಈ ಮಧ್ಯೆ ಇದರಲ್ಲಿ ರಾಜಕೀಯ ನುಸುಳಿದೆ. ಆಡಳಿತ ಪಕ್ಷದವರು ಈ ಯೋಜನೆ ಆಗಲೇಬೇಕು, ಮೀನುಗಾರಿಕೆಗೆ ತೊಂದರೆಯಿಲ್ಲ, ಮೀನುಗಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ, ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಿದ್ದರೆ ಪ್ರತಿಪಕ್ಷದವರು ಬಂದರು ನಿರ್ಮಾಣವಾದರೆ ಮೀನುಗಾರಿಕೆ ಸರ್ವನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಮೂರು ದಶಕಗಳ ಹಿಂದೆ ಅಳವೆ ಬಲದಂಡೆಯ ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮ, ಪಾವಿನಕುರ್ವೆಯ ಅರ್ಧಗ್ರಾಮ ಸಮುದ್ರ ಕೊರೆತಕ್ಕೆ ತುತ್ತಾಗಿ ಅಳವೆಯ ಎಡದಂಡೆಗೆ ಹೊಯ್ಗೆ ರಾಶಿಯಾಗಿ ಬಂದು ಕೂತಿತ್ತು. ಇದಕ್ಕೆ ಟೊಂಕ ಎಂದು ಹೆಸರಿಟ್ಟರು, ಇಲ್ಲಿ ಮನೆ ಕಟ್ಟಿಕೊಂಡಿರುವ ಬಹುಪಾಲು ಮೀನುಗಾರರ ಹೆಸರಿನಲ್ಲಿ ಆಸ್ತಿ ಇಲ್ಲ. ಬಂದರು ಹೆಸರಿನಲ್ಲಿ ಸ್ವಲ್ಪ ಭೂಮಿಪಡೆದ ಗುತ್ತಿಗೆದಾರರು ಮೀನುಗಾರರ ಆಸ್ತಿಯ ಮೇಲೆ ಕಣ್ಣು ಹಾಕಿದರೇ ಎಂಬ ಭಯ ಮೀನುಗಾರರನ್ನು ಕಾಡುತ್ತಿದೆ. ಮೀನುಗಾರ ಮುಖಂಡರ ಹೇಳಿಕೆಗಳು ದಿನಕ್ಕೊಂದು ಬರುತ್ತಿವೆ. ಪ್ರತಿಭಟನೆಯಲ್ಲಿ ರಾಜಕಾರಣಿಗಳು, ಬೇರೆ ತಾಲೂಕುಗಳ ಮೀನುಗಾರ ಮುಖಂಡರು ಪಾಲ್ಗೊಂಡು ರಾಜಕೀಯ ಸ್ವರೂಪ ಪಡೆದಿದೆ.

ಬಂದರಿನಿಂದ ದೇಶಕ್ಕೆ ಮತ್ತು ಜನತೆಗೆ ಯಾವ ರೀತಿ ಪ್ರಯೋಜನವಾಗಲಿದೆ, ಮೀನುಗಾರಿಕೆಗೆ, ಮೀನುಗಾರರರಿಗೆ ತೊಂದರೆಯಾಗುವುದಿಲ್ಲ, ಅಳವೆ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುವುದು ಸಮಸ್ಯೆಯಾಗಿದೆ. ಮೀನುಗಾರರು ಹಠಹಿಡಿದರೆ ಬಂದರು ಇಲಾಖೆಯವರು ಅಧಿ ಕಾರ ಬಳಸುತ್ತಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು, ಉಸ್ತುವಾರಿ ಮಂತ್ರಿಗಳು ಸ್ಥಳಕ್ಕೆ ಬಂದು ಮೀನುಗಾರರಿಗೆ ಮನದಟ್ಟುಮಾಡಿಕೊಟ್ಟರೆ ಒಳಿತಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next