ಹೊಸದಿಲ್ಲಿ: ತೈಲ ಮಾರಾಟಗಾರ ಕಂಪೆನಿಗಳು ಮಂಗಳವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ದರವನ್ನು ಪ್ರತೀ 19 ಕೆ.ಜಿ. ಸಿಲಿಂಡರ್‌ಗೆ 91.50 ರೂ.ಗಳಷ್ಟು ಕಡಿಮೆ ಮಾಡಿವೆ.
ಮಂಗಳವಾರದಿಂದಲೇ ಇದು ಜಾರಿಗೆ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. ಈ ದರ ಇಳಿಕೆಯೊಂದಿಗೆ ದೇಶದ ರಾಜಧಾನಿಯಲ್ಲಿ 19 ಕೆ.ಜಿ.ಗಳ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 1,907 ರೂ. ಆಗಲಿದೆ ಎಂದು ಎಎನ್‌ಐ ತಿಳಿಸಿದೆ.
ಸಬ್ಸಿಡಿ ರಹಿತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಕಳೆದ ಅಕ್ಟೋಬರ್‌ನಿಂದೀಚೆಗೆ ಬದಲಾವಣೆ ಆಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ನವೆಂಬರ್‌ನಿಂದೀಚೆಗೆ ಸ್ಥಿರವಾಗಿವೆ.
ಇದೇವೇಳೆ ವಿಮಾನ ಇಂಧನ ದರದಲ್ಲಿ ಶೇ. 8.5ರಷ್ಟು ಹೆಚ್ಚಳ ಮಾಡಲಾಗಿದ್ದು, ಅದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ದೇಶದ ರಾಜಧಾನಿಯಲ್ಲಿ ಜೆಟ್ ಇಂಧನ ಅಥವಾ ಏವಿಯೇಶನ್ ಟರ್ಬೈನ್ ಫ್ಯೂಯೆಲ್ (ಎಟಿಎಫ್) ದರ ಪ್ರತೀ ಕಿಲೋ ಲೀಟರ್‌ಗೆ 6,743 ರೂ. ಹೆಚ್ಚಿಸಲಾಗಿದ್ದು, 86,038.16 ರೂ.ಗಳಿಗೇರಿದೆ. ಇದು ಎಟಿಎಫ್ ನ ಸಾರ್ವಕಾಲಿಕ ಗರಿಷ್ಠ ದರ. 2008ರ ಆಗಸ್ಟ್‌ನಲ್ಲಿ ಪ್ರತೀ ಕಿಲೋ ಲೀಟರ್ ಎಟಿಎಫ್ ಗೆ 71,028.26 ರೂ. ಇದ್ದುದು ಇದುವರೆಗಿನ ಗರಿಷ್ಠ ದರವಾಗಿತ್ತು.