Advertisement

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಣಿಜ್ಯ ವ್ಯವಹಾರ ಬಂದ್‌

01:18 AM Jul 30, 2022 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಂಜಾಗ್ರತ ಕ್ರಮವಾಗಿ ಆಗಸ್ಟ್‌ 1 ರವರೆಗೆ ಸಂಜೆ 6ರಿಂದ ಮುಂಜಾನೆ 6ರ ವರೆಗೆ ಅಂಗಡಿ ಮುಂಗಟ್ಟು ಬಂದ್‌ ಮಾಡುವ ಜಿಲ್ಲಾಡಳಿತದ ಸೂಚನೆ ಶುಕ್ರವಾರದಿಂದಲೇ ಕಟ್ಟು ನಿಟ್ಟಾಗಿ ಜಾರಿಗೆ ಬಂದಿತು.

Advertisement

ಮಂಗಳೂರು ನಗರದಲ್ಲಿ ಹಾಗೂ ಗ್ರಾಮಾಂತರ ಸಹಿತ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಸಂಜೆ 6ರ ಬಳಿಕ ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿತು.

ಅಂಗಡಿ ಮುಂಗಟ್ಟು ಮುಚ್ಚುವಂತೆ ಪೊಲೀಸರು ಮೈಕ್‌ ಮೂಲಕ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಂಗಡಿಗಳು, ಮಾಲ್‌ಗ‌ಳು, ಚಿತ್ರ ಮಂದಿರ ಸೇರಿದಂತೆ ಎಲ್ಲ ವಾಣಿಜ್ಯ ವ್ಯವಹಾರ ಕೇಂದ್ರಗಳು ಬಂದ್‌ ಆಗಿದ್ದವು. ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿತ್ತು. ನಗರದ ವಿವಿಧ ಜಂಕ್ಷನ್‌ಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿ ಅನಗತ್ಯವಾಗಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು.

ಪುತ್ತೂರು : ಅಂಗಡಿ ಮುಂಗಟ್ಟು ಪೂರ್ಣ ಬಂದ್‌
ಪುತ್ತೂರು: ಪುತ್ತೂರು ನಗರ, ಗ್ರಾಮಾಂತರ ಪ್ರದೇಶದಲ್ಲೂ ಸಂಜೆ 6 ಗಂಟೆಯಾಗುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಸಂಜೆ ಹೊತ್ತು ಪೇಟೆ ಜನದಟ್ಟಣೆಯಿಂದ ಕೂಡಿತ್ತು. ನಾಗರಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಮೀಸಲು ಪಡೆಯ ಸಶಸ್ತ್ರ ಪೊಲೀಸರು ಮತ್ತು ನಗರ, ಸಂಚಾರ ಠಾಣೆಯ ಪೊಲೀಸರಿಂದ ಪೋಳ್ಯದಿಂದ ಕಬಕ ತನಕ ಪಥಸಂಚಲನ ನಡೆಸಲಾಯಿತು.

ಬಂಟ್ವಾಳ: ಸ್ವಯಂಪ್ರೇರಿತ ಬಂದ್‌
ಬಂಟ್ವಾಳ: ಬಿ.ಸಿ.ರೋಡು ಸೇರಿದಂತೆ ಬಂಟ್ವಾಳ ತಾಲೂಕಿನ ಹಲವೆಡೆಯೂ ಸಂಜೆ 6ರ ಬಳಿಕ ನಿಧಾನಕ್ಕೆ ಅಂಗಡಿ ಮುಂಗಟ್ಟುಗಳು ಮುಚ್ಚ ತೊಡಗಿದವು. ಬಿ.ಸಿ.ರೋಡಿನಲ್ಲಿ ಸಂಜೆ ಪೊಲೀಸರು ಪಥಸಂಚಲನ ನಡೆಸಿದ ಕಾರಣದಿಂದಲೂ ಹೆಚ್ಚಿನ ವರ್ತಕರು ಸ್ವಯಂಪ್ರೇರಿತರಾಗಿ ಬಂದ್‌ ಮಾಡಿದ್ದರು. ಬಂಟ್ವಾಳ ಪೇಟೆ, ಕೈಕಂಬ, ಕಲ್ಲಡ್ಕ, ಮೆಲ್ಕಾರ್‌, ಫರಂಗಿಪೇಟೆ ಭಾಗದಲ್ಲೂ ಬಹುತೇಕ ಬಂದ್‌ನ ವಾತಾವರಣ ಕಂಡುಬಂತು.ವಿಟ್ಲ ಪೇಟೆಯಲ್ಲೂ ವ್ಯಾಪಾರಸ್ಥರು ಅಂಗಡಿಗಳು ಮುಚ್ಚಿದ್ದವು.

Advertisement

ಸುಳ್ಯ: ತಾಲೂಕಿನಾದ್ಯಂತ ಅಂಗಡಿಗಳು ಬಂದ್‌
ಸುಳ್ಯ: ತಾಲೂಕಿನಾದ್ಯಂತ ಸಂಜೆ 6 ಗಂಟೆಗೆ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಮೊದಲೇ ಮೈಕ್‌ ಮೂಲಕ ಮಾಹಿತಿ ನೀಡಿದ್ದರು. ಅದರಂತೆ ಅಂಗಡಿ, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿದರು.

ಸುಳ್ಯ ನಗರ, ಕಲ್ಲುಗುಂಡಿ, ಸಂಪಾಜೆ, ಅರಂತೋಡು, ಐವರ್ನಾಡು, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಹರಿಹರ, ಕೊಲ್ಲಮೊಗ್ರು ಭಾಗದಲ್ಲೂ ಪೂರಕವಾಗಿ ಸ್ಪಂಧಿಸಿದ ಜನರು ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ. ಪೇಟೆಗಳಲ್ಲಿ ವಿರಳ ಜನ, ವಾಹನ ಸಂಚಾರವಿತ್ತು.

ಬೆಳ್ಳಾರೆಯಲ್ಲಿ ಹೆಚ್ಚುವರಿ ಪೊಲೀಸ್‌
ಪ್ರವೀಣ್‌ ಹತ್ಯೆ ನಡೆದ ಬೆಳ್ಳಾರೆ ಪೇಟೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದು, ಪೇಟೆಯ ಅಲ್ಲಲ್ಲಿ ಪೊಲೀಸರ ತಂಡ ಬಂದೋ ಬಸ್ತ್ನಲ್ಲಿ ನಿರತರಾಗಿದ್ದಾರೆ. ನೆಟ್ಟಾರು ಜಂಕ್ಷನ್‌, ಪ್ರವೀಣ್‌ ಮನೆ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಬೆಳ್ಳಾರೆ ಸಹಜ ಸ್ಥಿತಿಯಲ್ಲಿದ್ದು, ಸಂಜೆ 6ರ ಬಳಿಕ ಅಂಗಡಿಗಳು ಮುಚ್ಚಿದ್ದವು.

ಬೆಳ್ತಂಗಡಿ: ಅಂಗಡಿ
ಮುಂಗಟ್ಟು ಬಂದ್‌
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಜೆ 6ರ ಬಳಿಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಗ್ರಾಹಕರೂ ಸಹಕರಿಸಿದರು. ಗುರುವಾಯನಕೆರೆಯ ಖಾಸಗಿ ಶಾಲೆಯ ಕಾರ್ಯಕ್ರಮ ನಡೆಯುತ್ತಿದ್ದರೂ ದೂರು ಬಂದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರ ಸೂಚನೆಯಂತೆ ಕಾರ್ಯಕ್ರಮ ಮೊಟಕುಗೊಳಿಸಿ ವಿದ್ಯಾರ್ಥಿಗಳನ್ನು ಕಳುಹಿಸಲಾಗಿತ್ತು.

ಉಳ್ಳಾಲ ವರದಿ
ಉಳ್ಳಾಲ: ಶುಕ್ರವಾರ ಸಂಜೆ 6 ವರೆಗೆ ವಾಹನ ಸಂಚಾರ, ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಿತ್ತು. ತೊಕ್ಕೊಟ್ಟು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. ನಿಷೇ ದಾಜ್ಞೆಯ ಹಿನ್ನೆಲೆಯಲ್ಲಿ ಸಂಜೆ ಆರರಿಂದ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟವು. ಉಳ್ಳಾಲ ಪ್ರವೇಶದ್ವಾರದ ಓವರ್‌ ಬ್ರಿಜ್‌ ಬಳಿ ನಾಕಾಬಂದಿ ನಡೆಸಲಾಗಿದ್ದು ಪೊಲೀಸರು ತಪಾಸಣೆ ನಡೆಸು ತ್ತಿದ್ದಾರೆ. ಕಾಸರಗೋಡು ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತೊಕ್ಕೊಟ್ಟು ಜಂಕ್ಷನ್‌ ಪ್ರವೇಶದಂತೆ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next