ಭಟ್ಕಳ: ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಮಹಾಸತಿ ದೇವರ ಜಾತ್ರೆ ಶನಿವಾರ ಹಾಲಹಬ್ಬದಿಂದ ಆರಂಭಗೊಂಡಿದ್ದು ಸಂಪ್ರದಾಯ ಬದ್ಧವಾಗಿ ಪೂಜೆ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ರವಿಚಂದ್ರ ಎಸ್. ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಮ್ಮುಖದಲ್ಲಿ ನಡೆಸುವ ಮೂಲಕ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ರವಿಚಂದ್ರ ಎಸ್. ಅವರು ಸೋಡಿಗದ್ದೆ ಮಹಾಸತಿ ಜಾತ್ರೆ ಕರಾವಳಿ ಸೇರಿದಂತೆ ಮಲೆನಾಡಿನ ಜಾತ್ರೆಯಲ್ಲಿ ವಿಶೇಷತೆ ಹೊಂದಿದೆ. ದೇವಿಯಲ್ಲಿ ಭಕ್ತಾದಿಗಳು ಹರಕೆ ಹೊತ್ತು ಬರುವುದಕ್ಕೆ ಸಾಕಷ್ಟು ಮಹತ್ವವಿದೆ. ಇಂದು ಸ್ವತಹ ಶ್ರೀದೇವಿ ದರ್ಶನವನ್ನು ಪಡೆದಿದ್ದು ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಜಾತ್ರೆಯ ಮಹತ್ವವನ್ನು ಅರಿತು ಸಾಗಬೇಕು ಎಂದು ಹೇಳಿದರು.
ಸತತ ಒಂಬತ್ತು ದಿನಗಳ ಕಾಲ ಸಂಭ್ರಮದಿಂದ ನಡೆಯುವ ಅತ್ಯಂತ ಮಹತ್ವದ ಜಾತ್ರೆಯಾಗಿರುವ ಸೋಡಿಗದ್ದೆ ಜಾತ್ರಾ ಮಹೋತ್ಸವವೂ ಈ ಬಾರಿ ಕೋವಿಡ್ ನಿಂದ ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿ ಅನ್ವಯದಂತೆ ಆರಂಭಗೊಂಡಿದ್ದು, ಬೆಳಗ್ಗೆಯಿಂದಲೇ ಭಕ್ತರು ದೇವರಿಗೆ ಹೂವಿನ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು ತಮ್ಮ ಹರಕೆ, ಕಾಣಿಕೆ ಅರ್ಪಿಸಿದರು.
ಇದನ್ನೂ ಓದಿ:ಎನ್‌ಸಿಸಿ ಕೆಡೆಟ್‌ಗಳಿಗೆ ಶಸ್ತ್ರಾಸ್ತ್ರ ಮಾಹಿತಿ
ದೇವರ ದರ್ಶನಕ್ಕೆ ತೆರಳುವಂತೆ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಸಿಬ್ಬಂದಿ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾ ಭಕ್ತರಿಗೂಥರ್ಮಲ್ ಸ್ಕ್ಯಾನಿಂಗ್ ಮಾಡಿದರು. ಎಲ್ಲಾ ಭಕ್ತರಿಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಹಣ್ಣು ಕಾಯಿ ನೀಡಿ ದೇವರ ದರ್ಶನ ಪಡೆದುಕೊಳ್ಳುವಂತೆ ಸೂಚಿಸಲಾಯಿತು.