Advertisement

ಜನತಾ ಕಾಲನಿ ಮನೆ ನಿವೇಶನಕ್ಕೆ ಪ್ರಕ್ರಿಯೆ ಪ್ರಾರಂಭ

01:20 PM Mar 23, 2022 | Team Udayavani |

ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ.ನಿಂದ 2015ರಿಂದ ಪ್ರತ್ಯೇಕಗೊಂಡು ನೂತನ ಗ್ರಾ.ಪಂ. ಆಗಿ ಕಾರ್ಯ ನಿರ್ವಹಿಸುವ ಉಳ್ಳೂರು – 74 ಗ್ರಾಮ ಕಾರೇಬೈಲು -ಜಡ್ಡು ಎಂಬಲ್ಲಿ ಜನತಾ ಕಾಲನಿ ರಚಿಸಲು ಮನೆ ನಿವೇಶನಕ್ಕಾಗಿ ಪ್ರಕ್ರಿಯೆ ಆರಂಭಿಸಿದೆ.

Advertisement

ಗ್ರಾ.ಪಂ. ಈಗಾಗಲೇ ಸುಮಾರು 40 ಲಕ್ಷ ರೂ. ವೆಚ್ಚದ ಗ್ರಾ.ಪಂ. ಕಟ್ಟಡ ಹೊಂದಿದ್ದು, ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದೆ. ಗ್ರಾಮದಲ್ಲಿ ಒಟ್ಟು 824 ಮನೆಗಳಿದ್ದು, 3,346 ಜನಸಂಖ್ಯೆ ಹೊಂದಿದೆ. ಅದರಲ್ಲಿ 1,588 ಪುರುಷರು ಹಾಗೂ 1,758 ಮಹಿಳೆಯರಿದ್ದು, 2266.13 ಹೆಕ್ಟೇರ್‌ ಭೂಮಿ ಹೊಂದಿದೆ.

ಊರವರಿಗೆ ಮನೆ ನಿವೇಶನ ಇಲ್ಲ

ಈ ಗ್ರಾಮದ ಹೆಚ್ಚಿನ ಜನರು ದುಡಿಮೆಗಾಗಿ ಬೆಂಗಳೂರು, ಮುಂಬಯಿ, ಹುಬ್ಬಳ್ಳಿ, ಧಾರವಾಡ ಮುಂತಾದ ಕಡೆ ವಾಸಿಸುತ್ತಿದ್ದು, ಇಲ್ಲಿ ಕುಟುಂಬದ ತುಂಡು ಭೂಮಿಯನ್ನು ಹೊಂದಿದ್ದು ವಿಭಾಗ ಪತ್ರಗಳಾಗದೆ ಮನೆ ಕಟ್ಟುವ ಆಸೆ ಇದ್ದರೂ, ನಿವೇಶನಗಳಿಲ್ಲದೆ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಗ್ರಾ.ಪಂ. 74ನೇ ಉಳ್ಳೂರು ಗ್ರಾಮದ ಸರ್ವೇ ಸಂಖ್ಯೆ 153ರಲ್ಲಿ ಕಾರೇಬೈಲು-ಜಡ್ಡು ಎಂಬಲ್ಲಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್‌ ಅವರಿಂದ ಸರಕಾರಕ್ಕೆ ವಶಪಡಿಸಿಕೊಂಡ ಈ ಸರಕಾರಿ ಜಮೀನನ್ನು ಜನತಾ ಕಾಲನಿಯಾಗಿ ಮಾಡಲು ಗ್ರಾ.ಪಂ. ಮಹಾಸಭೆಯಲ್ಲಿ ನಿರ್ಣಯ ಕೈಗೊಂಡು ಕಾರ್ಯಪ್ರವೃತ್ತ ಆಗಿದೆ. ಎಲ್ಲವೂ ಎನಿಸಿದಂತೆ ಆದರೆ ಈ ಹತ್ತು ಎಕ್ರೆ ಜಾಗದಲ್ಲಿ ಸುಮಾರು 100 ಮನೆಗಳಿಗೆ ನೀಲ ನಕ್ಷೆ ತಯಾರು ಆಗಿದ್ದು ಸದ್ಯದಲ್ಲಿಯೇ 100 ಮನೆಗಳ ಬೃಹತ್‌ ಜನತಾ ಕಾಲನಿ ಉಳ್ಳೂರು- 74 ಗ್ರಾಮದ ಕಾರೇಬೈಲು – ಜಡ್ಡು ಎಂಬಲ್ಲಿ ತಲೆ ಎತ್ತಲಿದೆ.

ಮನವಿ

Advertisement

ಇತ್ತೀಚೆಗೆ ಗ್ರಾ.ಪಂ.ಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವಿಷಯ ತಿಳಿದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸರಕಾರದಿಂದ 100 ಮನೆಗಳ ಜನತಾ ಕಾಲನಿ ಮಾಡಲು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಅನ್ಯರಾಜ್ಯದವರ ಅತಿಕ್ರಮಣವನ್ನು ತೆರವುಗೊಳಿಸಿದ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್‌ ಇವರಿಂದಾಗಿ ಉಳಿದಿರುವ ಸರ್ವೇ ಸಂಖ್ಯೆ 153ರಲ್ಲಿ 10 ಎಕ್ರೆ ಜಾಗವನ್ನು ಈ ಗ್ರಾಮದ ಮನೆ ಇಲ್ಲದವರಿಗೆ ಮನೆ ನಿವೇಶನ ಹಾಗೂ ಕೈಗಾರಿಕಾ ನಿವೇಶನ ಮಾಡಿಕೊಡಬೇಕೆಂದು ಜಿಲ್ಲಾಡಳಿತ ಹಾಗೂ ನಮ್ಮ ಗ್ರಾ.ಪಂ. ಮನವರಿಕೆ ಮಾಡಿ ಮನವಿ ಸಲ್ಲಿಸಿದ್ದೇನೆ. ಗ್ರಾ.ಪಂ. ಮಹಾಸಭೆಯಲ್ಲಿ ನಿರ್ಣಯ ಕೈಗೊಂಡು ಸದ್ರಿ ಸ್ಥಳವನ್ನು ಗ್ರಾ.ಪಂ. ಕಾದಿರಿಸಿದೆ. ಜಿಲ್ಲಾಡಳಿತ ನನ್ನ ಮನವಿಗೆ ಸ್ಪಂದಿಸಿ ತಾಲೂಕು ಸರ್ವೇಯರ್‌ ಅನ್ನು ಸ್ಥಳಕ್ಕೆ ಕಳುಹಿಸಿ 100 ಮನೆಗಳಿಗಾಗುವಷ್ಟು ಜಾಗವನ್ನು ಗುರುತಿಸಿ ಮುಂದಿನ ಪ್ರಕ್ರಿಯೆಗೆ ಕಾರ್ಯಪ್ರವೃತ್ತವಾಗುತ್ತಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಚಿಟ್ಟೆ ರಾಜಗೋಪಾಲ ಹೆಗ್ಡೆ.

ನಿವೇಶನ (ಜನತಾ ಕಾಲನಿ)ಎಲ್ಲಿ?

ಅನ್ಯ ರಾಜ್ಯದ ಕೆಲವರು 74ನೇ ಉಳ್ಳೂರು ಗ್ರಾಮದ ಸರಕಾರಿ ಭೂಮಿಯನ್ನು ಬೇಲಿ ಹಾಕಿ ಆಕ್ರಮಿಸಿಕೊಂಡಾಗ ಅಂದಿನ ಉಡುಪಿ ಜಿಲ್ಲಾಧಿಕಾರಿ ಪೊನ್ನುರಾಜ್‌ ಅವರು ಸುಮಾರು 10 ಎಕ್ರೆಗೂ ಮಿಕ್ಕಿದ ಸರಕಾರಿ ಸ್ಥಳವನ್ನು ಗ್ರಾಮದ ಕಾರೇಬೈಲು-ಜಡ್ಡು ಎಂಬಲ್ಲಿ ಸರಕಾರದ ವಶಕ್ಕೆ ಪಡೆದುಕೊಂಡಿದ್ದು, ಅನಾಥವಾಗಿದ್ದು ಈ ಸ್ಥಳವು ಮುಂದಿನ ದಿನಗಳಲ್ಲಿ ಉಳ್ಳೂರಿನ ಜನತಾ ಕಾಲನಿಯಾಗಿ ಮಾರ್ಪಾಡಲಿದೆ.

ಪ್ರಕ್ರಿಯೆ ನಡೆಯುತ್ತಿದೆ

100 ಮನೆಗಳ ಜನತಾ ಕಾಲನಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಳ್ಳೂರು – 74 ಗ್ರಾಮ ಪಂ. ವ್ಯಾಪ್ತಿಯ ಬಾಕಿ ಇರುವ 94 ಸಿ. ಹಕ್ಕುಪತ್ರ ಹಾಗೂ ಅಕ್ರಮ – ಸಕ್ರಮ ಮಂಜೂರಾತಿಗಾಗಿ ಹೋರಾಟ ಮಾಡಲಾಗುವುದು. -ಪ್ರಸಾದ ಶೆಟ್ಟಿ ಕಟ್ಟಿನಬೈಲ್‌ ಅಧ್ಯಕ್ಷರು, ಗ್ರಾ.ಪಂ. ಉಳ್ಳೂರು – 74

Advertisement

Udayavani is now on Telegram. Click here to join our channel and stay updated with the latest news.

Next