ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸವಾಲು ಸಾಕಷ್ಟಿದೆ. ಇದರ ನಡುವೆಯೇ ದೇಶದಲ್ಲಿ ಆರ್ಥಿಕ ಶಿಸ್ತು ತರುವ ಕಾರ್ಯ ಆಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಭಾರತೀಯ ಮಜ್ದೂರ್ ಸಂಘ (ವಿವಿಧ ಬ್ಯಾಂಕಿಂಗ್ ವಿಭಾಗ)ದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ದತ್ತೋಪಂತ್ ತೇಂಗಡಿಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸ್ವತ: ಆರ್ಥಿಕ ತಜ್ಞರಾಗಿದ್ದರೂ, ತಮ್ಮ ಆಡಳಿತದಲ್ಲಿ ದೇಶದ ಆರ್ಥಿಕತೆಯನ್ನು ಕೆಟ್ಟ ಪರಿಸ್ಥಿತಿಗಿಳಿಸಿದರು. ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ದೇಶದ ಜಿಡಿಪಿ ಈಗ ಸ್ವಲ್ಪ ಮಟ್ಟಿಗೆ ಕುಸಿದಿರಬಹುದು. ಆದರೆ, ಇದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ವಿಶ್ವಮಟ್ಟದಲ್ಲೇ ಆರ್ಥಿಕ ಹಿಂಜರಿಕೆಯಾಗಿರುವುದರ ಪರಿಣಾಮ ಭಾರತದ ಮೇಲೂ ಆಗಿದೆ. ಇದು ಅಲ್ಪಾವಧಿಯಲ್ಲಿ ಸರಿಯಾಗಲಿದೆ. ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಬ್ಯಾಂಕಿಂಗ್ ವಲಯವನ್ನು ಶಕ್ತಿಶಾಲಿಗೊಳಿಸುವುದರ ಜತೆಗೆ ಕಾರ್ಪೋರೇಟ್ ವಲಯಕ್ಕೂ ವಿಶೇಷ ಶಕ್ತಿ ಸಾಮರ್ಥ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ನೋಟು ಅಮಾನ್ಯಿಕರಣ, ಜಿಎಸ್‌ಟಿ, ಕಪ್ಪು ಹಣ ವಾಪಸ್ಸಾತಿ ಸಹಿತವಾಗಿ ಹಲವು ದಿಟ್ಟ ನಿರ್ಧಾರದಿಂದ ಆರ್ಥಿಕ ಸುವ್ಯವಸ್ಥೆಯ ಜತೆಗೆ ಭಯೋತ್ಪಾದನೆ ನಿಗ್ರಹವೂ ಸಾಧ್ಯವಾಗಿದೆ. ನೋಟು ಅಮಾನ್ಯಿಕರಣ ಮಾಡಿದ ದೇಶಗಳಲ್ಲಿ ಅಧಿಕಾರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅದು ಗೊತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯಿಕರಣದಂತಹ ಕ್ರಮ ಕೈಗೊಂಡರು.
ಅದರ ಜತೆಗೆ ಜಿಎಸ್‌ಟಿ ಜಾರಿ ಮೂಲಕ ತೆರಿಗೆ ವಂಚನೆಗೆ ತಡೆಯೊಡ್ಡಿ, “ಒಂದು ದೇಶ-ಒಂದು ತೆರಿಗೆ’ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಸು.ರಾಮಣ್ಣ, ಭಾರತೀಯ ಮಜ್ದೂರ್ ಸಂಘದ ಬ್ಯಾಂಕಿಂಗ್ ಕ್ಷೇತ್ರದ ಉಪಾಧ್ಯಕ್ಷ ಕೆ.ಲಕ್ಷ್ಮಾರೆಡ್ಡಿ, ವಿರಾಜ್ ವಿ.ತಿಕೇಕರ್ ಉಪಸ್ಥಿತರಿದ್ದರು.