ಹೊಸನಗರ: ಭೂಹಕ್ಕು ಸಮಸ್ಯೆಯಿಂದ ರೈತರು ತಲ್ಲಣಗೊಂಡಿದ್ದಾರೆ. ಆದರೆ ಅಧಿಕಾರಿಗಳಿಗೆ ಹೇಳಲಾಗಿದೆ ಅವರು ಮಾಡುತ್ತಿಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಜನಪ್ರತಿನಿಧಿಗಳ ಕೆಳಗೆ ಅಧಿಕಾರಿಗಳಿದ್ದಾರೋ.. ಇಲ್ಲ ಅಧಿಕಾರಿಗಳು ಹೇಳಿದಂತೆ ಸರ್ಕಾರ ಕೇಳುತ್ತಿದೆಯೋ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀನಾ ಶ್ರೀನಿವಾಸ್ ವಾಗ್ಧಾಳಿ ನಡೆಸಿದ್ದಾರೆ.
ನಗರ ಹೋಬಳಿ ನಾಡಕಚೇರಿ ಎದುರು ನಾಗರಿಕರ ವೇದಿಕೆಯಿಂದ ಅರಣ್ಯ, ಭೂ ಹಕ್ಕಿಗಾಗಿ ಆರಂಭಿಸಲಾಗಿರುವ ಸರಣಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಕ್ರಾ ಸಾವೇಹಕ್ಲು ಸಂತ್ರಸ್ತರ ಸಮಸ್ಯೆಗೆ ಇನ್ನು ಮುಕ್ತಿ ಸಿಕ್ಕಿಲ್ಲ ಎಂದು ಆರೋಪಿಸಿದರು.
ಶಾಸಕರು, ಗೃಹಸಚಿವರಾದ ಆರಗ ಜ್ಞಾನೇಂದ್ರ ಅರಣ್ಯ ಹಕ್ಕಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಾಲು ಸಾಲು ಮಾತುಕತೆ ನಡೆಸಿದ್ದಾರೆ. ಆದರೆ ಅ ಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದರೆ ಹೇಗೆ. ಈ ಬಗ್ಗೆ ಬಿಗಿ ನಿಲುವು ತಾಳದಿದ್ದರೆ ಕಷ್ಟ. ಸಮಸ್ಯೆ ಬಗೆಹರಿಸಿ ಇಲ್ಲವೇ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.
75 ವರ್ಷದ ದಾಖಲೆ ಬದಲಿಗೆ 25 ವರ್ಷಕ್ಕೆ ಮಾರ್ಪಡಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು 5 ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಇನ್ನು ಪ್ರಸ್ತಾವನೆ ಸಲ್ಲಿಸಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಪಾರ್ಲಿಮೆಂಟ್‌ನ 540 ಸದಸ್ಯರಲ್ಲಿ ಸಂಸದ ರಾಘವೇಂದ್ರ ಒಬ್ಬರು ಮಾತನಾಡಿದರೇ ಸಾಕೇ, ಉಳಿದವರು ಏನು ಮಾಡುತ್ತಿದ್ದಾರೆ. ಕರ್ನಾಟಕದ ಅಷ್ಟು ಸಂಸದರನ್ನು ಒಟ್ಟುಗೂಡಿಸಿ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು. ಈಗಲೂ ನ್ಯಾಯ ಸಿಕ್ಕಿಲ್ಲವಾದರೆ ನಗರ ಹೋಬಳಿಯ ಸಂತ್ರಸ್ತರನ್ನು ದೇವರೇ ಕಾಪಾಡಬೇಕು. ನ್ಯಾಯ ಸಿಗುವ ತನಕ ಉಗ್ರ ಹೋರಾಟ ಅನಿವಾರ್ಯ ಎಂದರು.
ನಗರ ಹೋಬಳಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಮಾತನಾಡಿ, ಇಲ್ಲಿಯ ಜನರ ಸಂಕಷ್ಟ ಬಗೆಹರಿಸುವಂತೆ ಒತ್ತಾಯಿಸಿ 2015, 17, 19 ಮತ್ತು 2021ರಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಇಲ್ಲಿಯ ಶಾಸಕರು ರಾಜ್ಯದ ಗೃಹಮಂತ್ರಿಗಳಾಗಿದ್ದಾರೆ. ಹೋರಾಟಕ್ಕೂ ಬೆಂಬಲಿಸುತ್ತಿದ್ದಾರೆ. ಸರ್ಕಾರ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದು ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿದೆ ಎಂದು ಆರೋಪಿಸಿದರು. ಈ ಬಾರಿ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರಕಬೇಕು. ಮತ್ತೂಮ್ಮೆ ಧರಣಿ ಆರಂಭಿಸಿದ್ದು ಮಾ.28ರವರೆಗೆ ನಡೆಸಲಾಗುವುದು. ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಅಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ. ರವೀಂದ್ರ, ಮ್ಯಾಮೊಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ, ಉಳ್ಳಾಗದ್ದೆ ದೇವೇಂದ್ರಪ್ಪ, ಸು ಧೀರ್ ಯಡೂರು, ಕೊಡಸೆ ಚಂದ್ರಪ್ಪ, ಸತೀಶ್ ಪಟೇಲ್, ಗೋಪಾಲ್, ಮೂಡುಗೊಪ್ಪ, ಅರಮನೆಕೊಪ್ಪ, ಸಂಪೇಕಟ್ಟೆ, ನಿಟ್ಟೂರು, ಕರಿಮನೆ, ಅಂಡಗದೋದೂರು, ಖೈರಗುಂದ, ಯಡೂರು, ಸುಳುಗೋಡು ಗ್ರಾಪಂ ವ್ಯಾಪ್ತಿಯ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.