Advertisement

ಮೈತ್ರಿ ಧರ್ಮಕ್ಕೆ ವರಿಷ್ಠರ ಆದೇಶ ಪಾಲಿಸಿ

11:24 AM Apr 10, 2019 | Team Udayavani |

ಕೆ.ಆರ್‌.ನಗರ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಆಗಿರುವ ಮೈತ್ರಿ ಪಕ್ಷದ ಕಾರ್ಯಕರ್ತರಿಗೆ ಇಷ್ಟವಿಲ್ಲದಿದ್ದರೂ ನಾವೆಲ್ಲಾ ವರಿಷ್ಠರ ಆದೇಶವನ್ನು ಪಾಲಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಹೇಳಿದರು.

Advertisement

ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ರಾಹುಲ್‌ಗಾಂಧಿ ಆಗಮನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪರಿಸ್ಥಿತಿ ತಿಳಿಯಾಗಿ ಉತ್ತಮ ಅವಕಾಶ ಸಿಗುವವರೆಗೂ ತಾಳ್ಮೆಯಿಂದ ಕಾಯಬೇಕು ಎಂದರು.

ಕೆ.ಆರ್‌.ನಗರಕ್ಕೆ ಏ.13ರಂದು ರಾಹುಲ್‌ಗಾಂಧಿ ಆಗಮಿಸಲಿದ್ದು, ಅಂದು ಸಂಜೆ 4 ಗಂಟೆಗೆ ಪಟ್ಟಣದ ಪುರಸಭಾ ಬಯಲು ರಂಗ ಮಂದಿರದಲ್ಲಿ ಮೈತ್ರಿ ಅಭ್ಯರ್ಥಿ ನಿಖೀಲ್‌ ಪರ ಮತ ಯಾಚಿಸಲಿದ್ದು, ಸಭೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಕೋರಿದರು.

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ನಮ್ಮೂರಿಗೆ ಆಗಮಿಸುವ ರಾಹುಲ್‌ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಕೆ.ಆರ್‌.ನಗರ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿ.ರವಿಶಂಕರ್‌ ಅವರನ್ನು ಶಾಸಕರನ್ನಾಗಿಸುವುದು ನಮ್ಮೆಲ್ಲರ ಏಕೈಕ ಗುರಿ ಎಂದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ನಮಗೆ ಈಗ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ನಿಖೀಲ್‌ಗೆ ಮತ ಹಾಕಬೇಕೆಂದರೆ ಕಾರ್ಯಕರ್ತರಿಗೆ ನೋವಾಗುವುದು ಸಹಜ. ಆದರೆ, ವರಿಷ್ಠರ ಆದೇಶ ಪಾಲಿಸಬೇಕಿದೆ ಎಂದರು.

Advertisement

ರಾಹುಲ್‌ ಗಾಂಧಿ ಪ್ರಚಾರ ಸಮಾವೇಶದಲ್ಲಿ ಎಲ್ಲರೂ ಗೌರವಯುತವಾಗಿ ನಡೆದುಕೊಳ್ಳಬೇಕು. ಅಂದು ಏನಾದರೂ ಹೆಚ್ಚು ಕಡಿಮೆಯಾದರೆ ನನಗೆ ಮತ್ತು ಡಿ.ರವಿಶಂಕರ್‌ಗೆ ರಾಜಕೀಯವಾಗಿ ತೊಂದರೆಯಾಗಲಿದ್ದು, ಇದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಕೆ.ಆರ್‌.ನಗರ ಕಾಂಗ್ರೆಸ್‌ ಉಸ್ತುವಾರಿ ಅಶ್ವಿ‌ನ್‌ಕುಮಾರ್‌ ರೈ, ಎಐಸಿಸಿ ವಕ್ತಾರೆ ಐಶ್ವರ್ಯ, ಜಿಪಂ ಸದಸ್ಯರಾದ ಡಿ.ರವಿಶಂಕರ್‌, ಅಚ್ಚುತಾನಂದ, ಮಾಜಿ ಸದಸ್ಯರಾದ ಜಿ.ಆರ್‌.ರಾಮೇಗೌಡ, ರಾಜಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಹದೇವ್‌, ಉದಯಶಂಕರ್‌, ವಕ್ತಾರ ಸೈಯದ್‌ಜಾಬೀರ್‌, ತಾಪಂ ಮಾಜಿ ಉಪಾಧ್ಯಕ್ಷ ಉಮೇಶ್‌,

ಸದಸ್ಯ ಜಿ.ಎಸ್‌.ಮಂಜುನಾಥ್‌, ಎಪಿಎಂಸಿ ನಿರ್ದೇಶಕ ಪ್ರಶಾಂತ್‌, ಹಿಂದುಳಿದ ವರ್ಗಗಳ ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿರಾಘು, ಮುಖಂಡರಾದ ಎಸ್‌.ಪಿ.ತಮ್ಮಯ್ಯ, ಎಲ್‌.ಪಿ.ರವಿಕುಮಾರ್‌, ಸಿ.ಪಿ.ರಮೇಶ್‌, ಪ್ರಕಾಶ್‌ಕುಮಾರ್‌, ಹೆಡತಲೆ ಮಂಜುನಾಥ್‌, ಜಿ.ಎಂ.ಹೇಮಂತ್‌, ಶ್ರೀನಿವಾಸ್‌, ಸಿ.ಕೆ.ಬಸವರಾಜು, ಕೋಳಿಪ್ರಕಾಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next