Advertisement

ಬರಲಿದೆ “ಸವಿರುಚಿ ಕೈತುತ್ತು’ಸಂಚಾರಿ ಕ್ಯಾಂಟೀನ್‌ 

11:32 AM Oct 05, 2017 | Team Udayavani |

ಮಂಗಳೂರು: ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಊಟ-ತಿಂಡಿ ನೀಡುವ ಉದ್ದೇಶದಿಂದ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲೇ ಪ್ರತಿ ಜಿಲ್ಲೆಯಲ್ಲೂ ಇದೇ ರೀತಿ ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. 


“ಸವಿರುಚಿ ಕೈತುತ್ತು’ ಹೆಸರಲ್ಲಿ ಈ ಕ್ಯಾಂಟೀನ್‌ಗಳು ಇರಲಿದ್ದು, ನ.19ರಿಂದ ಎಲ್ಲ 30 ಜಿಲ್ಲೆಗಳಲ್ಲಿ ಈ ಸಂಚಾರಿ ಕ್ಯಾಂಟೀನ್‌ ಶುರುವಾಗಲಿವೆ. ಕ್ಯಾಂಟೀನ್‌ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ವಹಿಸಿ ಕೊಡಲಾಗಿದೆ. ಈ ಬಗ್ಗೆ ಸೂಚನೆ ನೀಡಲಾಗಿದ್ದು, ಸಾಲ ಪಡೆದು ಕ್ಯಾಂಟೀನ್‌ ನಡೆಸಲು ಸಿದ್ಧವಾಗಿರುವಂತೆ ತಿಳಿಸಲಾಗಿದೆ. ಆರಂಭದಲ್ಲಿ ಜಿಲ್ಲೆಯಲ್ಲಿ ಒಂದು ಸಂಚಾರಿ ಕ್ಯಾಂಟೀನ್‌ ಪ್ರಾರಂಭವಾಗಲಿದ್ದು, ಮುಂದೆ ಕ್ಯಾಂಟೀನ್‌ ಅನ್ನು ಮತ್ತಷ್ಟು ಕಡೆಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. 

Advertisement

10 ಲಕ್ಷ ರೂ. ಸಾಲ ಸೌಲಭ್ಯ 
ಸಂಚಾರಿ ಕ್ಯಾಂಟೀನ್‌ ಪ್ರಾರಂಭಿಸುವುದಕ್ಕೆ ಅರ್ಹ ಸ್ತ್ರೀಶಕ್ತಿ ಗುಂಪಿಗೆ 10 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ. ಈ ಸಾಲ ಯೋಜನೆಗೆ ಯಾವುದೇ ಭದ್ರತೆ ಒದಗಿಸುವ ಅಗತ್ಯವಿಲ್ಲ. ಅರ್ಜಿಯನ್ನು ಸ್ತ್ರೀ ಶಕ್ತಿ ಒಕ್ಕೂಟಗಳಿಂದ ಜಿಲ್ಲೆಯ ಉಪ ನಿರ್ದೇಶಕರು/ಜಿಲ್ಲಾ ವ್ಯವಸ್ಥಾಪಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಪಡೆಯಬಹುದು. ಇಲಾಖೆಯವರು ಶಿಫಾರಸ್ಸು ಮಾಡಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಿದರೆ, ಆಯ್ಕೆಯಾಗುವ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ, ನಿಗಮದಿಂದ ಮಂಜೂರಾತಿ ಆದೇಶ ನೀಡಿ ಸಾಲವನ್ನು ನೇರವಾಗಿ ಆನ್‌ಲೈನ್‌ ಮುಖಾಂತರ ಬಿಡುಗಡೆ ಮಾಡಲಾಗುತ್ತದೆ. 

5 ಲಕ್ಷ ರೂ.ಗಳ ಲಘು  ವಾಹನ
ಸಾಲದ ಮೊತ್ತ ಸ್ವೀಕರಿಸಿದ ಸ್ತ್ರೀಶಕ್ತಿ ಒಕ್ಕೂಟ ಕ್ಯಾಂಟೀನ್‌ಗಾಗಿ 5 ಲಕ್ಷ ರೂ.ಗಳ ಮಾರ್ಪಾಡುಗೊಳಿಸಿದ ಲಘು ವಾಹನ ಪಡೆದು ನೋಂದಣಿ ಮಾಡಬೇಕು. ರಾಜ್ಯವ್ಯಾಪಿ ವಾಹನದ ವಿನ್ಯಾಸ ಒಂದೇ ರೀತಿಯದ್ದಾಗಿರುತ್ತದೆ. ಅಡುಗೆ ಸಲಕರಣೆಗಳು, ಮಡಚುವ ಟೇಬಲ್‌, ಕುರ್ಚಿ, ಆಹಾರ ಸಿದ್ಧಪಡಿಸಲು ಸಾಮಗ್ರಿಗಳನ್ನು ಖರೀದಿಸಬೇಕು. 

ಮಹಿಳೆಯರೇ ಚಾಲಕರು
ಬೇಯಿಸಿದ ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಆಯಾ ಜಿಲ್ಲೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಹೊಂದಿರಬೇಕು.  ಕ್ಯಾಂಟೀನ್‌ ವಾಹನ ಚಾಲನೆಗೆ ಅನುಭವಿ ಮಹಿಳಾ ಚಾಲಕರನ್ನು ನೇಮಿಸಿಕೊಳ್ಳಬೇಕು. ಸಾಲ ಮಂಜೂರಾದ 3 ತಿಂಗಳೊಳಗೆ ಸವಿರುಚಿ ಮೊಬೈಲ್‌ ಕ್ಯಾಂಟೀನ್‌ ಸ್ಥಾಪಿಸಬೇಕು. ಎಲ್ಲಾ ಕ್ಯಾಂಟೀನಲ್ಲೂ ಮಹಿಳೆಯರು ಕಡ್ಡಾಯವಾಗಿ ಸಮವಸ್ತ್ರ, ಕ್ಯಾಪ್‌ ಹಾಗೂ ಬ್ಯಾಡ್ಜ್ಗಳನ್ನು ಧರಿಸಿರುತ್ತಾರೆ. ಪ್ರತಿ ಕ್ಯಾಂಟೀನ್‌ಗಳು ಪ್ರತ್ಯೇಕ ಹೆಸರಿನೊಂದಿಗೆ  (ಉದಾ:ಕಾವೇರಿ, ನೇತ್ರಾವತಿ) ಇರಲಿವೆ. 

ಬಡ್ಡಿ ರಹಿತ ಸಾಲ; ಪ್ರತಿ ತಿಂಗಳು ಮರುಪಾವತಿ
ಸಾಲ ಮಂಜೂರಾದ 6 ತಿಂಗಳ ನಂತರದ ಮುಂದಿನ 54 ತಿಂಗಳುಗಳಲ್ಲಿ ಪ್ರತಿ ತಿಂಗಳಿಗೆ 18,520 ರೂ.ಗಳಂತೆ 10 ಲಕ್ಷ ರೂ.ಗಳನ್ನು ಬಡ್ಡಿರಹಿತವಾಗಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಪ್ರತಿ ತಿಂಗಳಿನ 10ನೇ ತಾರೀಕಿನೊಳಗೆ ಸಾಲ ಮರುಪಾವತಿ ಕಂತನ್ನು ನೇರವಾಗಿ ಆಯಾ ಜಿಲ್ಲೆಯ ಇಲಾಖೆಗೆ ಡಿಡಿ ಅಥವಾ ಚೆಕ್‌ ಮೂಲಕ ಪಾವತಿಸಬೇಕು.  

Advertisement

ಸಾಲ ಪಡೆಯಲು ಅರ್ಹತೆ
ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳು ಬ್ಯಾಂಕ್‌ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಈ ಒಕ್ಕೂಟಗಳು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು. ಸ್ತ್ರೀಶಕ್ತಿ ಸಮೃದ್ಧಿ ಯೋಜನೆಯಡಿ ಜಿಲ್ಲಾ ಮಹಿಳಾ ಸ್ತ್ರೀಶಕ್ತಿ ಒಕ್ಕೂಟ ನೋಂದಣಿಯಾಗಿರುವ ಪ್ರತಿಯು ಆವಶ್ಯಕ. ಜತೆಗೆ ಸಂಚಾರಿ ಕ್ಯಾಂಟೀನ್‌ ನಡೆಸಲು ಮಹಾನಗರ ಪಾಲಿಕೆ, ಪುರಸಭೆಯಿಂದ ಪರವಾನಿಗೆ ಪತ್ರ ಪಡೆದಿರಬೇಕು. ಸಾಲ ಮರುಪಾವತಿ ಕುರಿತು ಸದಸ್ಯರೆಲ್ಲರು ಸಹಿ ಮಾಡಿದ 50 ರೂ. ಛಾಪಾ ಕಾಗದದಲ್ಲಿ ಕರಾರು ಪತ್ರ ಸಲ್ಲಿಸಬೇಕು. ಬ್ಯಾಂಕ್‌ ಖಾತೆಯ ವಿವರಗಳು, ಕ್ಯಾಂಟೀನ್‌ ಘಟಕದ ಯೋಜನಾ ವರದಿ ಸೇರಿದಂತೆ ಇತರ ಅಗತ್ಯ ದಾಖಲೆಗಳು ಅಗತ್ಯ.

ಕ್ಯಾಂಟೀನಲ್ಲಿ ಏನೇನಿರುತ್ತೆ? 
ತಿಂಡಿ, ಚಾ, ಕಾಫಿ, ಮಜ್ಜಿಗೆ, ಊಟ, ಹಣ್ಣಿನ ರಸ, ಸ್ಥಳೀಯ ಖಾದ್ಯಗಳು ಇರಲಿವೆ. ಇವೆಲ್ಲವನ್ನು ತಯಾರಿಸಿ, ಸಾರ್ವಜನಿಕರಿಗೆ ಅನುಕೂಲಕರವಾದ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜಿಲ್ಲೆಯ ಜನನಿಬಿಡ ಪ್ರದೇಶಗಳು, ಪ್ರಮುಖ ಸರಕಾರಿ ಕಚೇರಿಗಳು, ನ್ಯಾಯಾಲಯಗಳ ಆವರಣ, ಪ್ರಮುಖ ಸಂದರ್ಭಗಳಲ್ಲಿ ನಡೆಯುವ ಸಮ್ಮೇಳನ, ಉತ್ಸವಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಕಡ್ಡಾಯ ಸ್ಥಳ ನಿಗದಿಗೊಳಿಸಲಾಗುತ್ತದೆ. ಆಯಾ ಪ್ರದೇಶದ ಒಂದು ಪ್ರಾದೇಶಿಕ ಖಾದ್ಯವನ್ನು ಮಾರಾಟ ಮಾಡುವುದು ಹಾಗೂ ಅದರೊಂದಿಗೆ ಬೇಡಿಕೆಯಲ್ಲಿರುವ ವಿವಿಧ ತಿಂಡಿ ಊಟ ಸಿದ್ಧಪಡಿಸಲಾಗುತ್ತದೆ. ತಿಂಡಿ, ಊಟದ ಮೆನು ಮತ್ತು ದರಪಟ್ಟಿಯನ್ನು ಸವಿರುಚಿ ಕ್ಯಾಂಟೀನ್‌ನಲ್ಲಿ ಪ್ರತಿದಿನ ಪ್ರಚುರಪಡಿಸಲಾಗುತ್ತದೆ. ವ್ಯವಹಾರ ವೃದ್ಧಿ ಬಳಿಕ ಸಾಂಬಾರು ಪುಡಿ, ಮಸಾಲೆ ಪುಡಿ, ಚಕ್ಕುಲಿ, ಉಂಡೆ, ಸ್ಥಳೀಯ ತಿನಿಸುಗಳ ಮಾರಾಟಕ್ಕೂ ಅವಕಾಶವಿದೆ. ಇನ್ನು ಕ್ಯಾಂಟೀನ್‌ ಕಸ ವಿಲೇವಾರಿಗೂ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. 

ಸವಿರುಚಿ ಕೈತುತ್ತು ಸಂಚಾರಿ ಕ್ಯಾಂಟೀನ್‌ ನ.19ರಿಂದ ವಿಧ್ಯಕ್ತವಾಗಿ ಆರಂಭವಾಗಲಿದೆ. ಪ್ರತಿ ಜಿಲ್ಲೆಯಲ್ಲಿ ತಲಾ ಒಂದೊಂದು ಕ್ಯಾಂಟೀನ್‌ ಮೊದಲಿಗೆ ಚಾಲನೆಗೊಳ್ಳಲಿದ್ದು, ಬಳಿಕ ಪ್ರತಿ ತಾಲೂಕಿನಲ್ಲಿ ಈ ಸಂಚಾರಿ ಕ್ಯಾಂಟೀನ್‌ ಆರಂಭಿಸಲಾಗುವುದು.  
ಭಾರತೀ ಶಂಕರ್‌, ಅಧ್ಯಕ್ಷರು,  ರಾಜ್ಯ ಮಹಿಳಾ ಅಭಿವೃದ್ಧಿ  ನಿಗಮ   

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next