ಹೊಸದಿಲ್ಲಿ: ಹೊಸ ಮಾದರಿಯಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಸಮಗ್ರ ಇ-ಫೈಲಿಂಗ್ ಮತ್ತು ಕೇಂದ್ರೀಕೃತ ಪ್ರೊಸೆಸಿಂಗ್ ಸೆಂಟರ್ 2.0 ಯೋಜನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಅದಕ್ಕಾಗಿ 4,241 ಕೋಟಿ ರೂ. ನೀಡಲು ಸಮ್ಮತಿ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದೆ. ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ 63 ದಿನಗಳ ಬದಲಾಗಿ ಒಂದೇ ದಿನದಲ್ಲಿ ಸಲ್ಲಿಕೆ ಮಾಡಿರುವ ರಿಟರ್ನ್ಸ್ ಅನ್ನು ಪರಿಶೀಲಿಸಿ ರೀಫಂಡ್ ಮಾಡುವ ವ್ಯವಸ್ಥೆ ಬರಲಿದೆ. ಈ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೇಂದ್ರ ಸಂಪುಟ ಸಭೆಯ ಬಳಿಕ ಈ ಮಾಹಿತಿ ನೀಡಿದ್ದಾರೆ. 18 ತಿಂಗಳಲ್ಲಿ ಹೊಸ ವ್ಯವಸ್ಥೆ ಅಭಿವೃದ್ಧಿಯಾಗಲಿದೆ. ಮೂರು ತಿಂಗಳ ಕಾಲ ಅದನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಜಾರಿಗೊಳಿಸಲಾಗುತ್ತದೆ. ತೆರಿಗೆದಾರರ ಕುಂದು ಕೊರತೆ ನಿವಾರಣೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.ಹಾಲಿ ಇರುವ ಕೇಂದ್ರೀಕೃತ ಪ್ರೊಸೆಸಿಂಗ್ ಸೆಂಟರ್‌ಗೆ 1,482.44 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.