ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ನೆರೆಯ ಆಂದ್ರಪ್ರದೇಶದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತಾಲೂಕಿನ ಪೆರೇಸಂದ್ರ ಕ್ರಾಸ್ ನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಹೈದ್ರಾಬಾದ್ ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 7 ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಬ್ರಹ್ಮಾನಂದಂ ಸುಧಾಕರ್ ಸ್ವಗ್ರಾಮ ಪೆರೇಸಂದ್ರದಲ್ಲಿ ಸುಧಾಕರ್ ಪರ ಚುನಾವಣೆ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು ,ಸುಧಾಕರ್ ನನಗೆ ಆತ್ಮೀಯ ಸ್ನೇಹಿತ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿ. ಇಂಥವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ನಾನು ಹೈದ್ರಾಬಾದ್ ನಿಂದ ಇವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಇವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಅವರ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮತ್ತೆ ನಾನು ಭಾಗವಹಿಸುತ್ತೇನೆ ಎಂದು ನೆರದಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಅಭಿಮಾನಿಗಳ ಜನ ಸಾಗರ : ಗಡಿ ಜಿಲ್ಲೆಯಲ್ಲಿ ತೆಲುಗು ಪ್ರಭಾವ ಹೆಚ್ಚಿದ್ದು ತೆಲುಗುನಲ್ಲಿಯೆ ಭಾಷಣ ಮಾಡಿದ ಬ್ರಹ್ಮಾನಂದಂ, ಹಾಸ್ಯ ಭರಿತವಾಗಿ ಡೈಲಾಂಗಗಳ ಮೂಲಕ ಮತದಾರರನ್ನು ಮೋಡಿ ಮಾಡಿದ ಬ್ರಹ್ಮಾನಂದಂ ತಾಲೂಕಿನ ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ ಮತ್ತಿತರ ಕಡೆ ಚುನಾವಣೆ ಪ್ರಚಾರ ನಡೆಸಿದರು. ಬ್ರಹ್ಮಾನಂದಂರನ್ನು ನೋಡಲು ಅವರ ಅಭಿಮಾನಿಗಳ ದಂಡೇ ನೆರದಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೋಲೀಸರು ಹರಸಾಹಸ ಮಾಡಬೇಕಾಯಿತು. ಕೆಲ ಅಭಿಮಾನಿಗಳಿಗೆ ಪೊಲೀಸರ ಬೆತ್ತದ ರುಚಿ ಸಿಕ್ತು.