ಮೂವತ್ತೇ ಮೂವತ್ತು ದಿನ. ಅಷ್ಟರೊಳಗಡೆ ಆತ ಜರ್ಮನಿಯಲ್ಲಿರುವ ಹುಡುಗಿಯನ್ನು ಪ್ರೀತಿಸಿ, ಆಕೆಯನ್ನು ಪಂಚಾಯ್ತಿ ಎದುರು ನಿಲ್ಲಿಸಿ, “ಈತನನ್ನು ನಾನು ಪ್ರೀತಿಸುತ್ತೇನೆ’ ಎಂದು ಹೇಳಿಸಬೇಕು. ಊರಗೌಡನ ಸವಾಲನ್ನು ಸತ್ಯ ಸ್ವೀಕರಿಸುತ್ತಾನೆ. ಅದರಂತೆ, ಆತ ಜರ್ಮನಿಗೆ ಹೋಗುತ್ತಾನೆ. ಅಲ್ಲಿಂದ ವಾಪಾಸ್ ಬರುತ್ತಾನಾ, ಹುಡುಗಿ ಆತನ ಪ್ರೀತಿಗೆ ಆಕೆ ಒಲಿಯುತ್ತಾಳಾ ಎಂಬ ಕುತೂಹಲವಿದ್ದರೆ ನೀವು “ಸತ್ಯ ಹರಿಶ್ಚಂದ್ರ’ ಸಿನಿಮಾ ನೋಡಿ.
ಶರಣ್ ಅವರ “ಸತ್ಯ ಹರಿಶ್ಚಂದ್ರ’ ಅವರ ಮ್ಯಾನರೀಸಂ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಇಲ್ಲಿ ಮ್ಯಾನರೀಸಂ ಮಾತ್ರ ಶರಣ್ ಅವರದು. ಆದರೆ, ಕಥೆ ಪಂಜಾಬಿ ಸಿನಿಮಾದ್ದು. ಹೌದು, “ಸಿಂಗ್ ವರ್ಸಸ್ ಕೌರ್’ ಎಂಬ ಪಂಜಾಬಿ ಚಿತ್ರದ ರೀಮೇಕ್. ಮೂಲಕಥೆಗೆ ಯಾವುದೇ ಧಕ್ಕೆಯಾಗದಂತೆ ಯಥಾವತ್ ಇಲ್ಲಿ ಬಳಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಶರಣ್ ಸಿನಿಮಾದಲ್ಲಿ ಕಾಣಸಿಗುವ ಎಲ್ಲಾ ಅಂಶಗಳು ಇಲ್ಲಿ ಇವೆ.
ಆದರೆ, ಚಿತ್ರದುದ್ದಕ್ಕೂ ಸಿಗುತ್ತಿದ್ದ ಕಾಮಿಡಿ ಫ್ಲೇವರ್ ಮಾತ್ರ ಕೊಂಚ ಕಡಿಮೆ ಇದೆ. ಆ ಮಟ್ಟಿಗೆ ಇದು ಸ್ವಲ್ಪ ಸೀರಿಯಸ್ ಸಿನಿಮಾ ಎನ್ನಬಹುದು. ಇಲ್ಲಿ ಕಾಮಿಡಿ ಜೊತೆಗೆ ಸೆಂಟಿಮೆಂಟ್ ಕೂಡಾ ಇದೆ. ಹಾಗಾಗಿ, ಇಲ್ಲಿ ನೀವು ಶರಣ್ ಅಳ್ಳೋದನ್ನು ಕೂಡಾ ನೋಡಬೇಕಾಗುತ್ತದೆ. ಕಥೆಯ ವಿಚಾರಕ್ಕೆ ಹೇಳಬೇಕಾದರೆ ಇದು ಕನ್ನಡಕ್ಕೆ ತೀರಾ ಹೊಸ ಬಗೆಯ ಕಥೆಯಂತೂ ಅಲ್ಲ. ಪ್ರೀತಿ, ಪ್ರೀತಿಗಾಗಿ ನೂರು ಸುಳ್ಳು ಹೇಳಬೇಕಾದ ಸನ್ನಿವೇಶ, ಗ್ಯಾಪಲ್ಲಿ ಮತ್ತೂಂದು ಟ್ರ್ಯಾಕ್, ತಾಯಿ ಸೆಂಟಿಮೆಂಟ್, ಒಂದಷ್ಟು ಪಂಚಿಂಗ್ ಡೈಲಾಗ್ … ಕನ್ನಡಕ್ಕೆ ಈ ತರಹದ ಸಿನಿಮಾ ತೀರಾ ಹೊಸದೇನಲ್ಲ.
“ಸತ್ಯ ಹರಿಶ್ಚಂದ್ರ’ ಕೂಡಾ ಅದೇ ಕೆಟಗರಿಗೆ ಸೇರುವ ಸಿನಿಮಾ. ಇಡೀ ಹಳ್ಳಿಗೆ ಹಳ್ಳಿಯನ್ನೇ ಯಾಮಾರಿಸುವ ಸತ್ಯ ಎಂಬ ಯುವಕನ ಕಥೆಯನ್ನು ಫನ್ನಿಯಾಗಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಈ ಪ್ರಯತ್ನದಲ್ಲಿ ಅಲ್ಲಲ್ಲಿ ನಿಮಗೆ ನೋಡಿದ್ದನ್ನೇ ನೋಡುವ, ಹೊಸದೇನೋ ಬೇಕಿತ್ತು ಎಂಬ ಭಾವ ಬಾರದೇ ಇರದು. ಸಿನಿಮಾದ ಮೊದಲರ್ಧ ನಾಯಕನ ಇಂಟ್ರೋಡಕ್ಷನ್, ಕಥೆಯನ್ನು ಟ್ರ್ಯಾಕ್‌ಗೆ ತರಲು ಬೇಕಾದ ಸನ್ನಿವೇಶದಲ್ಲೇ ಮುಗಿದು ಹೋಗುತ್ತದೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸುವಂತಿಲ್ಲ.
ಸಿನಿಮಾ ನಿಮಗೆ ಖುಷಿಕೊಡೋದು ದ್ವಿತೀಯಾರ್ಧದಲ್ಲಿ. ತಾನು ಪ್ರೀತಿಸಿದ ಹುಡುಗಿಯನ್ನು ಪಟಾಯಿಸಲು ನಾಯಕ ವಿದೇಶದಲ್ಲಿ ಪಡುವ ಪಾಡು ಹಾಗೂ ಆ ನಂತರದ ಸನ್ನಿವೇಶಗಳು ಖುಷಿಕೊಡುತ್ತವೆ. ಬಹುಶಃ ಇಡೀ ಸಿನಿಮಾ ನಿಂತಿರೋದು ಕೂಡಾ ಇಲ್ಲಿನ ಕೆಲವು ಅಂಶಗಳ ಮೇಲೆಯೇ. ಅದನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಆಗಾಗ ಸೆಂಟಿಮೆಂಟ್ ಕೂಡಾ ಬಂದು ಹೋಗುತ್ತದೆ. ಒಂದೇ ಓಘದಲ್ಲಿ ಸಾಗುವ ಕಾಮಿಡಿ ಮಧ್ಯೆ ಬರುವ ಸೆಂಟಿಮೆಂಟ್ ಅಷ್ಟೇನೂ ವರ್ಕೌಟ್ ಆಗಿಲ್ಲ.
ಇದನ್ನು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಎಂದು ಹೇಳುವಂತಿಲ್ಲ. ಏಕೆಂದರೆ, ಇಲ್ಲೂ ಜಬರ್ದಸ್ತ್ ಆ್ಯಕ್ಷನ್ ಇದೆ, ಚೇಸಿಂಗ್ ಇದೆ, ಒಂದಷ್ಟು ಫ್ಯಾಮಿಲಿ ಡ್ರಾಮಾ ಕೂಡಾ ಇದೆ. ಹಾಗಾಗಿ, ಇದೊಂದು ಫ್ಯಾಮಿಲಿ ಪ್ಯಾಕೇಜ್ ಎನ್ನಬಹುದು. ಚಿತ್ರವನ್ನು ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಚಿತ್ರದಲ್ಲಿ ಕೆಲವು ಅನಗತ್ಯ ಹಾಗೂ ನಗುವೇ ಬಾರದ ಸನ್ನಿವೇಶಗಳನ್ನು ತುರುಕುವ ಮೂಲಕ ಚಿತ್ರದ ಅವಧಿ ಕೂಡಾ ಹೆಚ್ಚಿದೆ. ನಾಯಕ ಶರಣ್‌ಗೆ ಇಂತಹ ಪಾತ್ರ ಹೊಸದೇನಲ್ಲ. ಹಾಗಾಗಿ, ಸಲೀಸಾಗಿ ನಟಿಸಿದ್ದಾರೆ.
ನಗಿಸುವ ಜೊತೆಗೆ ಆ್ಯಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ ಶರಣ್. ನಾಯಕಿಯರಾದ ಸಂಚಿತಾ ಹಾಗೂ ಭಾವನಾ ರಾವ್‌ರಲ್ಲಿ ಸಂಚಿತಾ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ಆದರೆ, ಪಾತ್ರಕ್ಕೆ ಮತ್ತಷ್ಟು ನ್ಯಾಯ ಒದಗಿಸುವ ಅವಕಾಶ ಸಂಚಿತಾಗಿತ್ತು. ಉಳಿದಂತೆ ಚಿಕ್ಕಣ್ಣ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಸಂಚಾರಿ ವಿಜಯ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಚೆನ್ನಾಗಿವೆ. ಛಾಯಾಗ್ರಾಹಕ ಫೈಜಲ್ ಆಲಿಗೆ ಪೋರ್ಚುಗಲ್ ಅನ್ನು ಸುಂದರವಾಗಿ ತೋರಿಸುವ ಅವಕಾಶವಿದ್ದರೂ ಅದನ್ನು ಕೈ ಚೆಲ್ಲಿದ್ದಾರೆ.
ಚಿತ್ರ: ಸತ್ಯ ಹರಿಶ್ಚಂದ್ರ
ನಿರ್ಮಾಣ: ಕೆ.ಮಂಜು
ನಿರ್ದೇಶನ: ದಯಾಳ್ ಪದ್ಮನಾಭನ್
ತಾರಾಗಣ: ಶರಣ್, ಸಂಚಿತಾ, ಭಾವನಾ ರಾವ್, ಶರತ್ ಲೋಹಿತಾಶ್ವ, ಚಿಕ್ಕಣ್ಣ ಮತ್ತಿತರರು.
* ರವಿಪ್ರಕಾಶ್ ರೈ