ಕಿರುತೆರೆಯಲ್ಲಿನ “ಕುರಿ ಬಾಂಡ್’ ಕಾರ್ಯಕ್ರಮವನ್ನು ಖಂಡಿತಾ ನೋಡಿರುತ್ತೀರಿ. ಈಗ ಅದನ್ನು ಬಿಗ್‌ಸ್ಕ್ರೀನ್‌ನಲ್ಲಿ ಮಾಡಲು ಹೊರಟಿದ್ದಾರೆ ಸಾಗರ್. ಹತ್ತು ವರ್ಷಗಳಿಂದ ತಾವು ನಡೆಸಿಕೊಂಡು ಬರುತ್ತಿರುವ “ಕುರಿ ಬಾಂಡ್’ ಶೋ ಇಲ್ಲಿವರೆಗೆ ಎರಡು ಸಾವಿರಕ್ಕೂ ಹೆಚ್ಚು ಎಪಿಸೋಡ್ ಪ್ರಸಾರ ಕಂಡಿರುವ “ಕುರಿ ಬಾಂಡ್’ ಅನ್ನು ಸಿನಿಮಾ ಮಾಡಿದರೆ ಹೇಗೆ ಎನಿಸಿತಂತೆ ಸಾಗರ್ ಅವರಿಗೆ. ಅದರ ಪರಿಣಾಮವಾಗಿ ಇತ್ತೀಚೆಗೆ “ಕುರಿ ಬಾಂಡ್’ ಸಿನಿಮಾ ಸೆಟ್ಟೇರಿದೆ.
“ಜನರನ್ನು ನಗಿಸೋದು ಸುಲಭದ ಕೆಲಸವಲ್ಲ. ಅದರಲ್ಲೂ “ಕುರಿ ಬಾಂಡ್’ ಕಾರ್ಯಕ್ರಮ ಮಾಡುವಾಗ ಸಾಕಷ್ಟು ರಿಸ್ಕ್ ಕೂಡಾ ಎದುರಿಸಿದ್ದೇವೆ. ಮುಖ್ಯವಾಗಿ ನಾವು ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಯಾವುದಕ್ಕೆ ಬೇಗ ರಿಯಾಕ್ಟ್ ಮಾಡುತ್ತಾರೆಂಬುದು ಕೂಡಾ ಮುಖ್ಯವಾಗುತ್ತದೆ. ಆ ಸೈಕಲಾಜಿಯನ್ನು ಅರ್ಥಮಾಡಿಕೊಂಡೇ ನಾವು ಆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುತ್ತಿದ್ದೆವು’ ಎಂದು ತಮ್ಮ “ಕುರಿ ಬಾಂಡ್’ ಕಾರ್ಯಕ್ರಮದ ಬಗ್ಗೆ ಹೇಳಿಕೊಂಡರು ಸಾಗರ್.
ಈಗ “ಕುರಿ ಬಾಂಡ್’ ಅನ್ನು ಸಿನಿಮಾ ಮಾಡಲು ಹೊರಟಿರುವ ಅವರು, “ಕಾನ್ಸೆಪ್ಟ್ನಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಸೇರಿಸಿದ್ದೇನೆ. ಮುಖ್ಯವಾಗಿ ಬಿಗ್ ಸ್ಕ್ರೀನ್‌ಗೆ ಏನು ಬೇಕೋ ಆ ಅಂಶಗಳನ್ನು ಸೇರಿಸಿದ್ದೇವೆ. ಇದು ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಕಥೆಯಾದರೂ ಇಲ್ಲಿ ಮೂರು ಟ್ರ್ಯಾಕ್‌ಗಳು ಬರುತ್ತವೆ’ ಎಂದು ಸಿನಿಮಾ ಬಗ್ಗೆ ಹೇಳಿದರು. ಈ ಚಿತ್ರದಲ್ಲಿ ಸುಮಾರು 40 ಮಂದಿ ಹೊಸ ಪ್ರತಿಭೆಗಳು ನಟಿಸುತ್ತಿದ್ದಾರೆ. ಇವರನ್ನೆಲ್ಲಾ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆಯಂತೆ.
ಇನ್ನು, ಈ ಚಿತ್ರವನ್ನು ಮದ್ದೂರಿನ ಚನ್ನೇಗೌಡ ನಿರ್ಮಿಸುತ್ತಿದ್ದಾರೆ. ಸತ್ಯ ಸಾಯಿ ಮಂದಿರದ ಅರ್ಚಕರಾಗಿರುವ ಚನ್ನೇಗೌಡ ಅವರಿಗೆ ಈ ಕಾನ್ಸೆಪ್ಟ್ ಇಷ್ಟವಾಗಿ ಸಿನಿಮಾ ಮಾಡುತ್ತಿದ್ದಾರಂತೆ. ಇವರಿಗೆ ಯಾದಗಿರಿ ನಿರೂಪಾಧೀಶ್ವರ ಎನ್ನುವವರು ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರಂತೆ. ಉಳಿದಂತೆ ಕನ್ನಡದ ಸ್ಟಾರ್ ನಟರೊಬ್ಬರು ಗೆಸ್ಟ್ ಅಪಿಯರೆನ್ಸ್ ಮಾಡಲಿದ್ದಾರಂತೆ.