Advertisement

ಗಂಭೀರ ಪ್ರಪಂಚದಲ್ಲಿ ಹಾಸ್ಯದ ಮೆರವಣಿಗೆ 

10:43 AM Oct 09, 2017 | |

ಒಮ್ಮೆ ತಾನು ರಾವಣ ಎಂದು ಅಟ್ಟಹಾಸ ಮೆರೆಯುತ್ತಾನೆ, ಇನ್ನೊಮ್ಮೆ ತಾನು ಕರ್ಣ ಎಂದು ಹೆಂಡತಿಯ ಆಭರಣಗಳನ್ನೇ ದಾನ ಮಾಡಿಬಿಡುತ್ತಾನೆ, ಮತ್ತೂಮ್ಮೆ ತಾನು ಆಂಜನೇಯನೆಂಬ ಭ್ರಮೆಯಲ್ಲಿ ಮನೆಗೇ ಬೆಂಕಿ ಇಡುವುದಕ್ಕೆ ಹೋಗುತ್ತಾನೆ … ಹೀಗೆ ನಾರಾಯಣನದ್ದು ದಿನಕ್ಕೊಂದು ಅವತಾರ, ದಿನಕ್ಕೊಂದು ಅವಾಂತರ. ನೆಮ್ಮದಿಯಾಗಿರಬೇಕಿದ್ದ ದಿನಗಳಲ್ಲಿ ಗಂಡ ದಿನಕ್ಕೊಂದು ಅವಾಂತರಗಳನ್ನು ಮಾಡಬೇಕಾದರೆ, ಹೆಂಡತಿಯಾದವಳು ಏನು ಮಾಡಬೇಕು?

Advertisement

ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ ಇನ್ನು ಯಾವುದೇ ಒತ್ತಡಗಳಿಲ್ಲದ ಸಂದರ್ಭದಲ್ಲಿ ಗಂಡ ಹುಚ್ಚುಚ್ಚಾಗಿ ಆಡುತ್ತಿದ್ದರೆ, ಹೆಂಡತಿಯಾದವಳು ಹೇಗೆ ಎದುರಿಸಬೇಕು?  ಇಂಥದ್ದೊಂದು ಕ್ಲಿಷ್ಟ ಸಮಸ್ಯೆಯನ್ನು ಇಟ್ಟುಕೊಂಡು “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಎಂಬ ಒಂದು ಬೇರೆ ತರಹದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ವಿನಯಾ ಪ್ರಸಾದ್‌. ಪ್ರತೀ ಕುಟುಂಬದಲ್ಲೂ ಆಗಬಹುದಾದಂಥ, ಪ್ರತಿ ದಂಪತಿಯೂ ಜೀವನದಲ್ಲೊಮ್ಮೆ ಎದುರಿಸಬಹುದಾದ ಒಂದು ವಿಚಿತ್ರ ಸಮಸ್ಯೆಯನ್ನು ಅವರು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ.

ಬಹಳ ಗಂಭೀರವಾದ ಒಂದು ವಿಷಯವನ್ನು ಅವರು ಹಾಸ್ಯದ ಮೂಲಕ ಹೇಳಿದ್ದಾರೆ. ಬಹುಶಃ ಚಿತ್ರದ ಸಮಸ್ಯೆಯೇ ಅದು. ಸಮಸ್ಯೆ ಚಿತ್ರದ ಆಶಯ ಏನು ಎನ್ನುವುದು ಗೊತ್ತಾಗಬೇಕಿದ್ದರೆ, ಕೊನೆಯ 20 ನಿಮಿಷಗಳವರೆಗೂ ಕಾಯಬೇಕು. ಅಲ್ಲಿಯವರೆಗೂ ಗಂಡನ ವಿಚಿತ್ರವಾದ ಅವತಾರಗಳನ್ನು ಮತ್ತು ಅವನ ಸಮಸ್ಯೆ ಏನು ಎಂದು ಅರ್ಥ ಮಾಡಿಕೊಳ್ಳಲು ಬರುವ ವೈದ್ಯನ ಇನ್ನೂ ವಿಚಿತ್ರ ಅವಾಂತರಗಳೇ ಇವೆ. ಹಾಗಾಗಿ ಚಿತ್ರದ ಆಶಯ ಮತ್ತು ವಿನಯಾ ಅವರು ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಇದನ್ನೆಲ್ಲಾ ಹಾದು ಹೋಗಬೇಕು.

 ವಿನಯಾ ಅವರು ಇಲ್ಲಿ ಒಂದು ಬೇರೆ ತರಹದ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರ ಒಂದು ಸಮಸ್ಯೆಯಿಂದ ಪ್ರಾರಂಭವಾಗುತ್ತದೆ. ಕ್ರಮೇಣ ಚಿತ್ರದುದ್ದಕ್ಕೂ ಅದರ ವಿವಿಧ ಮಜಲುಗಳ ಚಿತ್ರಣ ಇದೆ. ಆದರೆ, ಆ ಸಮಸ್ಯೆ ಏಕೆ ಉದ್ಭವವಾಯಿತು ಮತ್ತು ಅದಕ್ಕೆ ಪರಿಹಾರವೇನು ಎಂಬುದು ಕ್ರಮೇಣ ಗೊತ್ತಾಗುತ್ತದೆ. ವಿಶೇಷ ಇರುವುದೇ ಇಲ್ಲಿ. ಪ್ರೇಕ್ಷಕ ಯಾವುದು ಸಮಸ್ಯೆ ಎಂದುಕೊಳ್ಳುತ್ತಾನೋ, ಅದು ಸಮಸ್ಯೆಯೇ ಅಲ್ಲ, ಸಮಸ್ಯೆ ಇನ್ನೆಲ್ಲೋ ಇದೆ ಎಂದು ಗೊತ್ತಾಗುತ್ತದೆ.

ಆ ಮಟ್ಟಿಗೆ, ಇಲ್ಲೊಂದು ವಿಭಿನ್ನ ಟ್ವಿಸ್ಟ್‌ ಇಟ್ಟಿದ್ದಾರೆ ವಿನಯಾ ಪ್ರಸಾದ್‌. ಏನನ್ನೋ ನಂಬಿಸುತ್ತಾ, ಕೊನೆಗೆ ಅದನ್ನು ಸುಳ್ಳು ಮಾಡುವುದರ ಜೊತೆಗೆ, ಒಂದು ಅದ್ಭುತವಾದ ಸಂದೇಶವನ್ನು ಹೇಳಿ ಕಳುಹಿಸಿದ್ದಾರೆ. ಆ ಸಂದೇಶ ಯಾರೋ ಒಬ್ಬರಿಗೆ ಸಲ್ಲುವಂತದ್ದಲ್ಲ, ಪ್ರತಿಯೊಬ್ಬ ಮನುಷ್ಯನೂ ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ಅಳವಡಿಸಿಕೊಳ್ಳಬೇಕಾದ ವಿಷಯ ಅದು. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲೇ ಒಂದು ವಿಶೇಷ ಪ್ರಯತ್ನ ಮಾಡಿದ್ದಾರೆ ವಿನಯಾ ಪ್ರಸಾದ್‌.

Advertisement

ಆದರೆ, ಈ ಪ್ರಪಂಚದಲ್ಲಿ ಒಬ್ಬರಾಗಬೇಕಾದರೆ, ಒಂದಿಷ್ಟು ಸಮಯ ಬೇಕು. ಏಕೆಂದರೆ, ಚಿತ್ರದ ಆಗುಹೋಗುಗಳನ್ನು ಅಷ್ಟು ಸುಲ¸‌ವಾಗಿ ಅರಗಿಸಿಕೊಳ್ಳುವುದು ಕಷ್ಟ. ಒಂದು ಕಥೆಯನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನೇನೋ ಅವರು ಮಾಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಬರುವ ದೃಶ್ಯಗಳು ಮತ್ತು ಪಾತ್ರಗಳು ಪ್ರೇಕ್ಷಕನನ್ನು ನಗಿಸುವುದಿಲ್ಲ, ಮನರಂಜಿಸುವುದೂ ಇಲ್ಲ. ಕೆಟ್ಟ ಅಸಹನೆಗೆ ಗುರಿ ಮಾಡುತ್ತದೆ ಎನ್ನುವುದು ನಿಜ.

ಅವನ್ನೆಲ್ಲಾ ದಾಟಿ ಕೊನೆಯವರೆಗೂ ಬಂದರೆ, ಪ್ರೇಕ್ಷಕ ತೃಪ್ತಿಕರವಾಗಿ ಎದ್ದುಬರುವಂತಾಗುತ್ತದೆ.ಚಿತ್ರದ ನಿಜವಾದ ಹೈಲೈಟ್‌ ಎಂದರೆ ಅದು ಮಂಜುನಾಥ ಹೆಗಡೆ ಅವರ ಅಭಿನಯ. ಗಂಡನ ಅವಾಂತರಗಳನ್ನು ಸಹಿಸಿಕೊಳ್ಳುವ ವಿನಯಾ ಪ್ರಸಾದ್‌ ಅವರದ್ದೂ ಗಂಭೀರ ಅಭಿನಯ. ಮನೋವೈದ್ಯರಾಗಿ ಬರುವ ಜ್ಯೋತಿಪ್ರಕಾಶ್‌ ಅಭಿನಯ ಚೆನ್ನಾಗೇನೋ ಇದೆ. ಆದರೆ, ಹಲವು ಕಡೆ ಅತೀ ಮಾಡುತ್ತಾರೆ ಅವರು.

ಚಿತ್ರ: ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ
ನಿರ್ದೇಶನ: ವಿನಯಾ ಪ್ರಸಾದ್‌
ನಿರ್ಮಾಣ: ವಿನಯಾ ಪ್ರಸಾದ್‌
ತಾರಾಗಣ: ವಿನಯಾ ಪ್ರಸಾದ್‌, ಮಂಜುನಾಥ ಹೆಗಡೆ, ಜ್ಯೋತಿಪ್ರಕಾಶ್‌ ಆತ್ರೇಯ, ಪ್ರಥಮ, ಶೈಲಜಾ ಜೋಷಿ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next