Advertisement
ಒಂದೇ ಮಾತಲ್ಲಿ ಹೇಳುವುದಾದರೆ, “ಅಮೆರಿಕ’ದ ಅಧ್ಯಕ್ಷರು ನಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರೀತಿಸುವುದರಲ್ಲೂ ಕಡಿಮೆ ಇಲ್ಲ ಎಂಬುದನ್ನಿಲ್ಲಿ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಶರಣ್ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದರೆ, ಅಲ್ಲೊಂದು ಮಜವಾದ ಕಥೆ ಇರುತ್ತೆ, ಸೊಗಸಾದ ದೃಶ್ಯಗಳಿರುತ್ತವೆ, ಕಚಗುಳಿ ಇಡುವ ಮಾತುಗಳು ತುಂಬಿರುತ್ತವೆ. ಇಲ್ಲೂ ಅದು ಮುಂದುವರೆದಿದೆ.
Related Articles
Advertisement
ಇದು ಶರಣ್ ಅವರ “ಅಧ್ಯಕ್ಷ’ ಚಿತ್ರ ಮುಂದುವರೆದ ಭಾಗವಂತೂ ಅಲ್ಲ. ಇಲ್ಲಿ ಹೆಸರಷ್ಟೇ ಹೋಲಿಕೆ ಇದೆಯಾದರೂ, ಅವರ ಹಾವ-ಭಾವ ಎಲ್ಲವೂ ಹೊಸತು. ಹಾಗಾಗಿ, ಅಧ್ಯಕ್ಷರ ಅಮೆರಿಕ ಪ್ರವಾಸದ ರುಚಿ ನೋಡಿಯೇ ಸವಿಯಬೇಕು. ಹೀರೋ ಹೆಸರು ಉಲ್ಲಾಸ್. ಸದಾ ಟೋಟಲ್ ಲಾಸ್ ಅಂದುಕೊಂಡು ತಿರುಗಾಡುವ ಹೀರೋಗೆ ಸೇಠು ಹುಡುಗಿಯನ್ನು ಮದುವೆಯಾಗಿ ಲೈಫಲ್ಲಿ ಸೆಟ್ಲ ಆಗುವ ಆಸೆ.
ಹೇಗೋ ಸೇಠು ಹುಡುಗಿಯನ್ನು ಪಟಾಯಿಸಿ ಮದ್ವೆ ಮಾಡ್ಕೊಬೇಕು ಅಂದುಕೊಳ್ಳುವ ಹೊತ್ತಿಗೆ, ಅಮೆರಿಕದ ಹುಡುಗಿಯೊಬ್ಬಳು ಹೀರೋಗೆ ಲಿಂಕ್ ಆಗಿ ಸಿಂಕ್ ಆಗ್ತಾಳೆ. ಅವಳ್ಳೋ ದೊಡ್ಡ ಕುಡುಕಿ. ಇವನೂ ಕುಡಿಯೋದರಲ್ಲಿ ಕಡಿಮೆ ಏನಲ್ಲ. ಇಬ್ಬರಿಗೂ ಮದ್ವೆಯಾಗುತ್ತೆ. ಹೀರೋನದು ಸಂಪ್ರದಾಯಸ್ಥ ಕುಟುಂಬ. ಹಗಲಿನಲ್ಲೇ ಕುಡಿಯೋ ಹೆಂಡತಿಯ ವಿಷಯ ಗೊತ್ತಾಗದ ಹಾಗೆ ಮೈಂಟೇನ್ ಮಾಡುವ ಹೀರೋ, ಕೊನೆಗೆ ಹೆಂಡತಿ ಜೊತೆ ಅಮೆರಿಕಕ್ಕೆ ಹಾರುತ್ತಾನೆ.
ಅಲ್ಲೂ ಕುಡಿಯೋ ಹೆಂಡತಿಯನ್ನು ಸರಿದಾರಿಗೆ ತರಬೇಕೆಂದು ಹೋರಾಡುವ ಗಂಡನ ಬಗ್ಗೆ ತಪ್ಪು ತಿಳಿದು ಡೈವೋರ್ಸ್‌ಗೆ ಮುಂದಾಗುತ್ತಾಳೆ. ಆಮೇಲೆ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್. ಆ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಅಧ್ಯಕ್ಷರನ್ನು ನೋಡಬಹುದು. ಶರಣ್ ಎನರ್ಜಿ ಎಂದಿಗಿಂತ ಸ್ವಲ್ಪ ಜೋರಾಗಿದೆ. ಅಧ್ಯಕ್ಷರಾಗಿ ತಮ ಕೆಲಸವನ್ನು ಪರಿಪೂರ್ಣಗೊಳಿಸಿದ್ದಾರೆ. ರಾಗಿಣಿಗೆ ಪಾತ್ರ ಸರಿಹೊಂದಿದೆ. ಕುಡುಕ ಹೆಂಡತಿಯಾಗಿ ಸೈ ಎನಿಸಿಕೊಂಡಿದ್ದಾರೆ.
ಶಿವರಾಜ್ ಕೆ.ಆರ್.ಪೇಟೆ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ತಬಲನಾಣಿ ಹಾಸ್ಯಭರಿತ ಮಾತುಗಳಿಂದ ಇಷ್ಟವಾಗುತ್ತಾರೆ. ರಂಗಾಯಣ ರಘು, ಸಾಧುಕೋಕಿಲ, ಅಶೋಕ್,ಅವಿನಾಶ್, ಪ್ರಕಾಶ್ ಬೆಳವಾಡಿ ಸೇರಿದಂತೆ ಕಾಣುವ ಪಾತ್ರಗಳು ಅಧ್ಯಕ್ಷರ ಜೋಶ್‌ಗೆ ಕಾರಣವಾಗಿವೆ. ಹರಿಕೃಷ್ಣ ಸಂಗೀತದ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ತಕ್ಕಮಟ್ಟಿಗೆ ಸಮಾಧಾನ ತರಿಸುತ್ತೆ. ಮೂರು ಮಂದಿಯ ಕೈಯಲ್ಲಿ ಕ್ಯಾಮೆರಾ ಕೆಲಸ ಆಗಿರುವುದರಿಂದಲೋ ಏನೋ, ಅಧ್ಯಕ್ಷರು ಒಂದೊಂದು ಸಲ ಒಂದೊಂದು ರೀತಿ ಕಾಣುತ್ತಾರೆ.
ಚಿತ್ರ: ಅಧ್ಯಕ್ಷ ಇನ್ ಅಮೆರಿಕನಿರ್ಮಾಣ: ವಿಶ್ವಪ್ರಸಾದ್
ನಿರ್ದೇಶನ: ಯೋಗಾನಂದ್ ಮುದ್ದಾನ್
ತಾರಾಗಣ: ಶರಣ್, ರಾಗಿಣಿ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ರಂಗಾಯಣ ರಘು, ಅಶೋಕ್, ಪ್ರಕಾಶ್ ಬೆಳವಾಡಿ ಇತರರು. * ವಿಜಯ್ ಭರಮಸಾಗರ