ನವದೆಹಲಿ: ಟೆಲಿವಿಷನ್ ಕಾರ್ಯಕ್ರಮದ ಜನಪ್ರಿಯ ಜೋಡಿ, ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಪತಿ, ಸ್ಕ್ರಿಪ್ಟ್ ರೈಟರ್ ಹರ್ಷ್ ಲಿಂಬಾಚಿಯಾ ನಿವಾಸದ ಮೇಲೆ ಎನ್ ಸಿಬಿ(ಮಾದಕವಸ್ತು ನಿಯಂತ್ರಣ ಬ್ಯುರೋ) ಅಧಿಕಾರಿಗಳು ಶನಿವಾರ(ನವೆಂಬರ್ 21, 2020) ದಾಳಿ ನಡೆಸಿ ಶೋಧ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿದೆ.
ಎನ್ ಸಿಬಿಗೆ ಲಭ್ಯವಾದ ಸುಳಿವಿನ ಆಧಾರದ ಮೇಲೆ ಸಿಂಗ್ ದಂಪತಿ ನಿವಾಸದ ಮೇಲೆ ದಾಳಿ ನಡೆದಿದೆ. ಎನ್ ಸಿಬಿ ಮೂಲಗಳ ಪ್ರಕಾರ, ಮಾದಕ ವಸ್ತು ಸರಬರಾಜುದಾರರಿಂದ ಲಭ್ಯವಾದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿ ಅಲ್ಪಪ್ರಮಾಣದ ಮಾದಕ ವಸ್ತು ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಂಧೇರಿಯಲ್ಲಿರುವ ಲೋಖಾಂಡೆವಾಲಾ ಕಾಂಪ್ಲೆಕ್ಸ್ ನಲ್ಲಿರುವ ಭಾರ್ತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೇತೃತ್ವದ ತಂಡ ದಾಳಿ ನಡೆಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಭೀಕರ ಅಪಘಾತ-ಕಾರಿನಲ್ಲಿದ್ದ ಏಳು ಮಂದಿ ಜೀವಂತ ದಹನ, ಓರ್ವ ಮಹಿಳೆ ಪವಾಡಸದೃಶ ಪಾರು
ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಪೆಡ್ಲರ್ ಗಳ ವಿಚಾರಣೆ ನಡೆಸುವ ವೇಳೆ ಭಾರ್ತಿ ಸಿಂಗ್ ಹೆಸರು ಬೆಳಕಿಗೆ ಬಂದಿರುವುದಾಗಿ ಸಮೀರ್ ವಾಂಖೇಡೆ ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ್ ಅವರನ್ನು ಎನ್ ಸಿಬಿ ಅಧಿಕಾರಿಗಳು ಕಚೇರಿಯಲ್ಲಿ ವಿಚಾರಣೆ ನಡೆಸಿರುವುದಾಗಿ ವರದಿ ವಿವರಿಸಿದೆ.