ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಕಾಮೆಡ್-ಕೆ ನಡೆಸುವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಮೇ 12ರಂದು ದೇಶಾದ್ಯಂತ ಆನ್‌ಲೈನ್ ಮೂಲಕ ನಡೆಯಲಿದೆ.
ದೇಶದ 120ಕ್ಕೂ ಅಧಿಕ ಶಿಕ್ಷಣ ಸಂಸ್ಥೆ ಹಾಗೂ 21ಕ್ಕೂ ಅಧಿಕ ಖಾಸಗಿ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಸೀಟುಗಳು ಕಾಮೆಡ್-ಕೆ ಪರೀಕ್ಷೆಯ ರ್‍ಯಾಂಕಿಂಗ್ ಮೂಲಕ ಹಂಚಿಕೆಯಾಗಲಿದೆ.
ಕರ್ನಾಟಕದ 25 ಪರೀಕ್ಷಾ ಕೇಂದ್ರ ಸೇರಿದಂತೆ ದೇಶದ 150 ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಆನ್‌ಲೈನ್ ಮೂಲಕ ನಡೆಯಲಿದ್ದು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪರೀಕ್ಷೆಯ ಕೀ ಉತ್ತರ ಮೇ 16ಕ್ಕೆ ಪ್ರಕಟಿಸುವ ಸಾಧ್ಯತೆ ಇದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಗಣಿತ ಪರೀಕ್ಷೆಗಳು ತಲಾ 60 ಅಂಕಕ್ಕೆ ನಡೆಯಲಿದೆ. ಪರೀಕ್ಷೆಗೆ ಕಾಮೆಡ್-ಕೆ ವೆಬ್‌ಸೈಟ್ www.comedk.org ಮೂಲಕ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರ ತಲುಪಿರಬೇಕು.
ಭಾವಚಿತ್ರ ಸಹಿತವಾಗಿರುವ ಗುರುತಿನ ಚೀಟಿಯೊಂದನ್ನು ತೆಗೆದುಕೊಂಡು ಹೋಗಬೇಕು. ಮೊಬೈಲ್, ಇಯರ್‌ಫೋನ್, ಟ್ಯಾಬ್ ಸೇರಿದಂತೆ ಯಾವುದೇ ರೀತಿಯ ಇಲೆಕ್ಟ್ರಾನಿಕ್ ಉಪಕರಣ ಅಥವಾ ಪರೀಕ್ಷೆಗೆ ಪೂರಕವಲ್ಲದ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.