ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹಿಜಾಬ್ ಹಾಗೂ ಬುರ್ಕಾ ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಗೆ ಸಮವಸ್ತ್ರ ಧರಿಸಿ ಬರುವಂತೆ ಮನೆಗೆ ವಾಪಸ್ ಕಳುಹಿಸಿ, ಸಮವಸ್ತ್ರ ಧರಿಸಿ ಬಂದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಿದ ಘಟನೆ ಇಲ್ಲಿನ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಿಗೆ ಅದನ್ನು ತೆಗೆದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಸಮವಸ್ತ್ರ ಧರಿಸದೆ, ಬುರ್ಕಾ ಧರಿಸಿಕೊಂಡು ಆಗಮಿಸಿದ್ದ ವಿದ್ಯಾರ್ಥಿನಿಗೆ ಸಮವಸ್ತ್ರ ಧರಿಸಿ ಆಗಮಿಸುವಂತೆ ಮನೆಗೆ ವಾಪಸ್ ಕಳುಹಿಸಲಾಯಿತು. ಸಮವಸ್ತ್ರ ಧರಿಸಿ ಬಂದ ನಂತರ ಪರೀಕ್ಷೆಗೆ ಅವಕಾಶ ನೀಡಲಾಯಿತು.
ಡಿಡಿಪಿಐ ಕೆಳದಿಮಠ ಭೇಟಿ: ಎಸ್‌ಎಸ್ ಎಲ್‌ಸಿ ಪರೀಕ್ಷೆ ಹಿನ್ನೆಲೆ ನಗರದ ಪರೀಕ್ಷಾ ಕೇಂದ್ರಗಳಿಗೆ ಡಿಡಿಪಿಐ ಎಸ್.ಎಸ್. ಕೆಳದಿಮಠ ಭೇಟಿ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ಪರೀಕ್ಷೆ ನಡೆಯುತ್ತಿದೆ. ಸರಕಾರದ ನಿಯಮಾವಳಿ ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲಿಯೂ ಸಹಿತ ಹಿಜಾಬ್‌ಗ ಅವಕಾಶ ಮಾಡಿಲ್ಲ. ಹಿಜಾಬ್ ಹಾಕಿಕೊಂಡು ಬಂದರೂ ಸಹಿತ ಅವುಗಳನ್ನು ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಎಲ್ಲ ಕೇಂದ್ರಗಳಲ್ಲೂ ಯಾವುದೇ ಹಿಜಾಬ್ ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ ಎಲ್ಲೆಡೆ ಸೂಕ್ತ ಬಂದೋಬಸ್ತ್ ಕಲ್ಪಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಪರಿಶೀಲನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಗಮಿಸಿದ ಎಲ್ಲ ಮಕ್ಕಳಿಗೆ ಲ್ಯಾಮಿಂಗ್ಟನ್ ಶಾಲೆ ಸೇರಿದಂತೆ ನಗರದ ಬಹುತೇಕ ಶಾಲೆಗಳಲ್ಲಿ ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ಮಾಡಿ ಒಳ ಬಿಡಲಾಗುತ್ತಿತ್ತು.