ಹೇಳೇ ಹುಡುಗಿ, ಎಲ್ಲಿಯ ತನಕ ನಿಲ್ಲಲಿ ನಾ ಇಲ್ಲಿ!? ಕಾಲಕೆಳಗೆ ನುಸುಳಿ ಸಾಗುವ ಕಾಲಚಕ್ರವ ಎಷ್ಟು ಅಂತ ಸದೆಬಡಿದು ನಿಲ್ಲಿಸಿಕೊಳ್ಳಲಿ? ನಾಳೆ ಬೆಳಗಾದರೆ ಅದೇ ಸೂರ್ಯ ಮತ್ತೆ ಹೊಸದಾಗಿ ಬಂದಾನು ಅಷ್ಟೇ! ಆದರೆ, ನಾ ಹಳೆಯವನಾಗಿಯೂ ನಿಲ್ಲಲಾಗದು!
ಅರೆಗಣ್ಣಿನಲ್ಲಿಯೇ ಬಂದಿದ್ದ ಚಂದಿರನು ಹೊರಟು ಹೋದ ಕತ್ತಲೆಯ ಅನಾಥ ಮಾಡಿ! ಕಂದೀಲಿಗೆ ಒಂದಿಷ್ಟು ಪ್ರೀತಿ ಎಣ್ಣೆಯ ಸುರುವಿಕೊಂಡು ಹಚ್ಚಿ ಕೂತಿದ್ದೇನೆ ಮನದ ಬಾಗಿಲಲಿ. ಕಾಯುವ ಕಾತರವೊಂದೆ! ಪ್ರೀತಿಯ ತುಂಬಿಕೊಂಡು ಉರಿಯುತ್ತಿರುವ ಕಂದೀಲ ಬೆಳಕಲ್ಲಿ ನಿನ್ನ ಹೆಜ್ಜೆ ಗುರುತುಗಳ ಕಾಣಬೇಕಿದೆ. ಕಾದು, ಕ್ಷಣವೊಂದು ಯುಗವಾಗಿ ಹೊರಟೇ ಬಿಟ್ಟೆ ಪ್ರೀತಿಯ ಕಂದೀಲ ಬೆಳಕಲ್ಲಿ ನಿನ್ನೊಲವ ಅರಸುತ್ತಾ! ಇದಾಗಲೇ ಅರ್ಧ ದಾರಿ ಸಾಗಿ ಬಂದೆ ಹುಡುಗಿ.
ಎಲ್ಲೂ ನಿನ್ನ ಸುಳಿವಿಲ್ಲ. ಮೂರು ದಿನವಾದರೂ ಮುದುಡಿಕೊಂಡ ಮೊಗ್ಗುಗಳು ಅರಳಿಲ್ಲ. ಅರಳಿ ನಿನ್ನ ಮುಡಿಗೇರದೆ ಸೋತು ನೆಲ ಸೇರುವ ಹೇಡಿತನ ಅವಕ್ಕಿಲ್ಲ! ಹುಡುಗಿ, ಎದೆಯ ಪ್ರೀತಿಗೆ ಭಾಷೆ ಬೇಕಿಲ್ಲ ಅಂದುಕೊಂಡಿದ್ದೇನೆ. ಕಂದೀಲೇ ಮಿಡಿಯುವಾಗ, ಮೊಗ್ಗೆ ಮುನಿದಿರುವಾಗ, ಗರಿಕೆ ಕಾದಿರುವಾಗ ಇನ್ಯಾವ ಪದಗಳ ತಂದು ಅರ್ಥ ಮಾಡಿಸಲಿ!? ಅರ್ಧ ದಾರಿಯ ಸವೆಸಿದವನಿಗೆ ನಿನ್ನೂರ ತಲುಪಲು ಇನ್ನೆಷ್ಟು ದೂರ? ಅದೊಂದು ದೂರವೇ? ಬಂದು ಬಿಡಲೇ ನಿನ್ನೂರ ಸರಹದ್ದಿಗೆ!? ಬಂದು ನಿನ್ನ ಹೆಸರ ಕೂಗಲೇ ಒಮ್ಮೆ ಸುಮ್ಮನೆ?
ಕಾಲಚಕ್ರ ಕಾಲ ಬುಡದಲ್ಲಿ ಬಂದು ಕುಣಿಯುತ್ತಿದೆ. ಅರೆಗಳಿಗೆಯೂ ನಿಲ್ಲಲಾರೆನೆಂದು ಒಂದೇ ಸವåನೆ ಹಠವದಕೆ! ಕಾಲವನ್ನೇ ನಿಲ್ಲಿಸಬಲ್ಲೆ ಹುಡುಗಿ! ಆದರೆ ಅದು ಕೈ ಮೀರಿ ಸರಿದು ಹೋಗುವ ಮುನ್ನ ನಿನ್ನ ನೋಡಬೇಕಿದೆ. ಮನಸ್ಸು ನಿನ್ನ ಕಾಣಬೇಕಿದೆ. ನಾನು ಹಾಗೆಂದೇ ನನ್ನ ಜೀವಕ್ಕೆ ಪ್ರಾಮಿಸ್ ಮಾಡಿಕೊಂಡಿದ್ದೇನೆ. ನಾನು ನಿನಗೆ ಸೋಲಲು ಸಿದ್ಧ ಕಣೇ, ನನ್ನ ಪ್ರಾಮಿಸ್‌ಗಲ್ಲ! ಅದರೊಂದಿಗೆ ಎಂದಿಗೂ ರಾಜಿಯಿಲ್ಲ.
ನನ್ನ ಪರದೇಶಿ ಮಾಡಲಾರೆ ಎಂದು ಪಕ್ಕಾ ಯೋಚಿಸಿಯೇ ಬಂದಿದ್ದೇನೆ. ಬರುವ ದಾರಿಯಲ್ಲಿ ನನ್ನೆಲ್ಲಾ ಹಳೆಯ ಹುಚ್ಚಾಟಗಳನ್ನು ಮೂಟೆಕಟ್ಟಿ ಸಿಕ್ಕ ಕೊಳಕ್ಕೆ ಎಸೆದು ಬಂದಿದ್ದೇನೆ. ಹಳೆದೆಲ್ಲವ ಅಳಿಸಿಕೊಂಡು ಹೊಚ್ಚಹೊಸದಾಗಿ ಬಂದಿದ್ದೇನೆ ನಿನ್ನೂರಿನ ಅಗಸಿಗೆ! ನನ್ನ ಎದೆ ಬಡಿತಕೂ ಈ ಸಂಜೆ, ಈ ರಾತ್ರಿ, ಹಗಲುಗಳು ದುಬಾರಿ ಎನಿಸಿವೆ. ಹೇಳೇ ಹುಡುಗಿ, ಎಲ್ಲಿಯ ತನಕ ನಿಲ್ಲಲಿ ನಾ ಇಲ್ಲಿ!? ಕಾಲಕೆಳಗೆ ನುಸುಳಿ ಸಾಗುವ ಕಾಲಚಕ್ರವ ಎಷ್ಟು ಅಂತ ಸದೆಬಡಿದು ನಿಲ್ಲಿಸಿಕೊಳ್ಳಲಿ?
ನಾಳೆ ಬೆಳಗಾದರೆ ಅದೇ ಸೂರ್ಯ ಮತ್ತೆ ಹೊಸದಾಗಿ ಬಂದಾನು ಅಷ್ಟೇ! ಆದರೆ, ನಾ ಹಳೆಯವನಾಗಿಯೂ ನಿಲ್ಲಲಾಗದು! ನಿಂತರೂ ನಿಂತೇನು ನಿನ್ನ ಮೊಹಬ್ಬತ್ತಿನ ಮುಂದೆ ಕೇವಲ ಪ್ರತಿಮೆಯಾಗಿ. ನನ್ನಂತೆ ಪ್ರೀತಿಯನ್ನು ಕಾದು ಕಳೆದುಕೊಂಡ ಹುಚ್ಚು ಪ್ರೀಮಿಗಳು ನನ್ನ ಹಿಂಬಾಲಕರಾಗಿ ಬಂದು ನಿನ್ನೂರಿನ ಗಡಿಯಲ್ಲಿ ನನ್ನ ಪ್ರತಿಮೆ ನಿಲ್ಲಿಸಿಹೋಗಬಹುದು! ಇಲ್ಲ, ಇಲ್ಲ ನಾ ಆಗಲಾರೆ ಹಾಗೆಂದಿಗೂ! ಸೋತ ಪ್ರೇಮಿಗಳ ಸಾಲಿನಲ್ಲಿ ನಾನೆಂದೂ ನಿಲ್ಲಲಾರೆ.
* ಸದಾಶಿವ್ ಸೊರಟೂರು