Advertisement

ನೀವೇ ಬಹಿರಂಗ ಚರ್ಚೆಗೆ ಬನ್ನಿ: ಕೆ.ಮಹದೇವ್ ಗೆ ಸೀಗೂರು ವಿಜಯಕುಮಾರ್ ಸವಾಲ್

10:38 PM Feb 02, 2023 | Team Udayavani |

ಪಿರಿಯಾಪಟ್ಟಣ : ಶಾಸಕ ಕೆ.ಮಹದೇವ್ ರವರು ತಮ್ಮ ಹಿಂಬಾಲಕರ ಮೂಲಕ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಆದಿ ಜಾಂಬವ ಸಮಾಜ ಹಾಗೂ ಶ್ರೀ ಹರಳಯ್ಯ ಮಠದ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡಿಸುವ ಬದಲು ನೀವೇ ಬಹಿರಂಗ ಚರ್ಚೆಗೆ ಬನ್ನಿ ಎಂದು ಶ್ರೀ ಗುರು ಹರಳಯ್ಯ ಮಠದ ಕಾರ್ಯದರ್ಶಿ ಸೀಗೂರು ವಿಜಯಕುಮಾರ್ ಬಹಿರಂಗ ಸವಾಲು ಹಾಕಿದರು.

Advertisement

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿರುವ ಮಾದಿಗ ಸಮಾಜದ ಆರಾಧ್ಯ ದೈವ ಶ್ರೀ ಗುರು ಹರಳಯ್ಯನವರ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮಠದ ಅಭಿವೃದ್ಧಿಗೆ 2009 ರಲ್ಲಿ ಯಡಿಯೂರಪ್ಪನವರ ಸರ್ಕಾರ 50 ಲಕ್ಷ ಅನುದಾನ ನೀಡುವ ಭರವಸೆ ನೀಡಿ ಕಗ್ಗುಂಡಿ ಗ್ರಾಮದಿಂದ ಹರಳಯ್ಯ ಮಠದ ವರೆಗೆ 32 ಲಕ್ಷ ಹಣ ಖರ್ಚು ಮಾಡಿ ರಸ್ತೆ ನಿರ್ಮಿಸಲಾಯಿತು ಆದರೆ ಸರ್ಕಾರ ಈ ಕೆಲಸಕ್ಕೆ ಕೇವಲ 20 ಮಾತ್ರ ಬಿಡುಗಡೆಗೊಳಿಸಿತು. ಇನ್ನುಳಿದ 12 ಲಕ್ಷ ಹಣ ಸಾಲವಾಗಿ ಉಳಿದು ಧಾನಿಗಳಿಂದ ಸಂಗ್ರಹಿಸಿ ಗುತ್ತಿಗೆದಾರರಿಗೆ ನೀಡಲಾಯಿತು. ನಂತರ ಶ್ರೀ ಮಠಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ ನೀಡಿ 2 ಕೋಟಿ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿ ನಯಾ ಪೈಸೆಯನ್ನು ನೀಡಲಿಲ್ಲ. ನಂತರ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಆಂಜನೇಯನವರು 2.60 ಕೋಟಿ ರಸ್ತೆ ಕಾಮಗಾರಿ ಅಭಿವೃದ್ಧಿ, ಮಠದ ಮೂಲಭೂತ ಸೌಲಭ್ಯ ಹಾಗೂ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದರು ಆದರೆ ಸರ್ಕಾರ ಬದಲಾದ ನಂತರ ಶಾಸಕರಾಗಿ ಮಹದೇವ್ ಆಯ್ಕೆಯಾಗಿ 5 ವರ್ಷಗಳು ಸಮೀಪಿಸುತ್ತಿವೆ ಆದರೆ ಇವರು ನಯಾ ಪೈಸೆಯನ್ನು ಬಿಡುಗಡೆ ಮಾಡದಿದ್ದರೂ ತಮ್ಮ ಹಿಂಬಾಲಕರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಅಂದು ನಿರ್ಮಾಣವಾಗುತ್ತಿದ್ದ ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿ ಸ್ಥಗಿತಗೊಂಡು 3 ವರ್ಷಗಳೇ ಕಳೆದಿವೆ ಈ ಬಗ್ಗೆ ಸಮಾಜದ ಮುಖಂಡರನ್ನು ಕೆರದು ಸಭೆ ನಡೆಸದ ಶಾಸಕರು ಈಗ ತಮ್ಮ ಹಿಂಬಾಲಕರ ಪಕ್ಷದ ಸಭೆಗಳಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಸುಳ್ಳು ಹೇಳಿಕೆ ನೀಡಿ ಮಾದಿಗ ಸಮಾಜ ಹಾಗೂ ಮುಸ್ಲಿಂ ಸಮಾಜದ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಸುತ್ತಿದ್ದಾರೆ ಒಂದು ಸಮಾಜದ ಮಠ ಹಾಗೂ ಭವನದ ಬಗ್ಗೆ ಹಗುರವಾಗಿ ಮಾತನಾಡುವ ಶಾಸಕರಿಗೆ ಹಾಗೂ ಅವರ ಹಿಂಬಾಲಕರಿಗೆ ನೈತಿಕತೆ ಇದ್ದರೆ ಸಮಾಜದ ಮಠಕ್ಕೆ ಅವರ ಕೊಡುಗೆ ಏನು ಎಂದು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿದ ಅವರು ಹರಳಯ್ಯ ಮಠದ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಕಳ್ಳರ ಕೂಟ ಎಂದು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಆರೋಪ ಮಾಡಿದ್ದಾರೆ. ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸಿ ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಮಠದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಒಂದು ಸಮುದಾಯವನ್ನು ನಿಂದಿಸುವ ಕಾರ್ಯ ಇದಾಗಿದೆ. ಇಂತಹ ಸುಳ್ಳು ಆರೋಪಗಳನ್ನು ಅಂತ್ಯವಾಗಬೇಕು. ಮಠದ ಅಭಿವೃದ್ಧಿಗಾಗಿ ಟ್ರಸ್ಟಿನ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಸೂಕ್ತ ಸಾಕ್ಷಾಧಾರಗಳಿದ್ದು ಸುಳ್ಳು ಆರೋಪಗಳನ್ನು ಮಾಡುತ್ತಿರುವ ನೀವುಗಳು ಮಠದಲ್ಲಿನ ಲೋಪ ದೋಷಗಳ ಬಗ್ಗೆ ಸಾಕ್ಷಿಗಳನ್ನು ಒದಗಿಸಿದಲ್ಲಿ ನಾವು ಚರ್ಚೆಗೆ ಬರಲು ಸಿದ್ಧವಿದ್ದೇವೆ. ಅದನ್ನು ಬಿಟ್ಟು ಮಠದ ಟ್ರಸ್ಟಿಗಳ ಬಗ್ಗೆ ಮತ್ತು ಒಂದು ಸಮುದಾಯದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಸರಿಯಾದ ಪ್ರಕ್ರಿಯೆ ಅಲ್ಲ. ನಿಮ್ಮ ಈ ದುರ್ವರ್ತನೆಯನ್ನು ತಿದ್ದಿಕೊಳ್ಳದಿದ್ದಲ್ಲಿ ನಾವು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದರು.

ತಾಪಂ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಟಿ.ಈರಯ್ಯ ಮಾತನಾಡಿ ತನ್ನ ರಕ್ಷಣೆಗೆ ಅಂಬೇಡ್ಕರ್ ಮತ್ತು ದಲಿತ ಚಳುವಳಿಯ ಹೆಸರನ್ನು ಹೇಳುವ ನಿಮಗೆ ಚಳುವಳಿಯ ಸ್ಥಾಪನೆಯ ಬಗ್ಗೆ ಅರಿವಿಲ್ಲ. ಇತರರ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ರಾಮು ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದಾನೆ.ಈತನ ಮೇಲೆ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಮೊಕದ್ದಮೆಗಳು ದಾಖಲಾಗಿವೆ. ಮತ್ತೊಬ್ಬರ ಸಂಕಷ್ಟದಲ್ಲಿ ತಾವು ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ ಈ ಬಗ್ಗೆ ದಾಖಲೆಗಳನ್ನು ನಾನು ಬಿಡುಗಡೆ ಮಾಡುತ್ತೇನೆ. ನೀವೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದರು.

ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಾಜಿ ತಾ ಪಂ ಸದಸ್ಯ ಜಮೃದ್ದ್ ಪಾಷಾ ಮಾತನಾಡಿ ತಾಲೂಕಿನಲ್ಲಿ ದಲಿತ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯ ಸಹೋದರತ್ವದ ಭಾವನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ರಾಮು ಬಾಬು ಜಗಜೀವನರಂ ಭವನದ ನಿರ್ಮಾಣದ ವಿಚಾರದಲ್ಲಿ ಈ ಎರಡು ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಮುದಾಯದ ಅಧ್ಯಕ್ಷ ಪಿ.ಪಿ.ಪುಟ್ಟಯ್ಯ, ಆದಿ ಜಾಂಬವ ಸಂಘದ ಅಧ್ಯಕ್ಷ ಭೂತನಹಳ್ಳಿ ಶಿವಣ್ಣ, ಗ್ರಾಪಂ ಸದಸ್ಯ ನರಸಿಂಹಮೂರ್ತಿ, ಮುಖಂಡರಾದ ಜಯಸ್ವಾಮಿ, ಸಿ.ಜಿ. ರವಿ, ಮಹದೇವ, ಬಸವರಾಜು, ಕಿಟ್ಟಿ, ರಾಮುಮುತ್ತೂರು, ರವಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next