ಬೆಂಗಳೂರು: 17 ಸರ್ಕಾರಿ ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜು ಸೇರಿ ಜಯದೇವ ಎದೆರೋಗಗಳ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಂತಹ ಸ್ವಾಯತ್ತ ಆರೋಗ್ಯ ಸಂಸ್ಥೆಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ, ಅತ್ಯವಶ್ಯಕತೆ ಇದ್ದರೆ ಮಾತ್ರ ಇಂತಹ ಆಸ್ಪತ್ರೆಗೆ ಭೇಟಿ ಕೊಡಿ.
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋಗುವುದಿದ್ದರೆ 15 ದಿನ ವಿಳಂಬ ಮಾಡಲು ಸಾಧ್ಯವೇ ಎಂದು ನೋಡಿ. ಆ ಮೂಲಕ ಆಸ್ಪತ್ರೆಯಲ್ಲಿ ಆಗುವ ಜನಸಂದಣಿ ತಪ್ಪಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಜನಸಾಮಾನ್ಯರಿಗೆ ಸಲಹೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವೈರಾಣು ಬಂದರೆ ಸಾವೇ ಗತಿ ಎನ್ನುವ ತೀರ್ಮಾನಕ್ಕೆ ಬರುವಂತೆ ಆಗಬಾರದು. ಬಂದವರೆಲ್ಲಾ ಸಾಯಲ್ಲ. ಹಾಗಾಗಿ “ಡೆಡ್ಲಿ’ಯಂತಹ ಪದ ಬಳಕೆ ನಿಯಂತ್ರಿಸಿ, ಇಲ್ಲವಾದರೆ ಕೊರೊನಾ ಸೋಂಕಿತರು ಮಾನಸಿಕವಾಗಿ ಕುಗ್ಗಲಿದ್ದಾರೆ ಎಂದು ಮಾಧ್ಯಮಗಳಿಗೆ ಅವರು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯ 200 ಹಾಸಿಗೆಯ ಒಂದು ಆಸ್ಪತ್ರೆಯನ್ನು ಪಡೆಯಲು ನಿರ್ಧರಿಸಲಾಗಿದೆ. ಇನ್ಫೋಸಿಸ್ ಸಹಕಾರದಿಂದ ಇಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತದೆ. ಕೆಲ ದಿನಗಳಲ್ಲಿಯೇ ಆಸ್ಪತ್ರೆ ಕಾರ್ಯಾಚರಣೆ ಮಾಡಲಿದೆ ಎಂದು ಸಚಿವರು ತಿಳಿಸಿದರು.
ಕೊರೊನಾ ಪೀಡಿತರ ಅಂಕಿ-ಅಂಶ
32: ರಾಜ್ಯದಲ್ಲಿ ಮಂಗಳವಾರ ಆಸ್ಪತ್ರೆಗೆ ದಾಖಲಾದವರು. (ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 4, ಬೆಂಗಳೂರಿನ ಇತರ ಆಸ್ಪತ್ರೆಗಳಲ್ಲಿ 10, ದಕ್ಷಿಣ ಕನ್ನಡ 7, ಉತ್ತರ ಕನ್ನಡ 4, ಕೊಡಗು 2, ಬೀದರ್, ಗದಗ, ಬಳ್ಳಾರಿ, ಚಿಕ್ಕಮಗಳೂರು, ಉಡುಪಿಯಲ್ಲಿ ಒಬ್ಬರು)
09: ಮಂಗಳವಾರ ನೆಗೆಟಿವ್ ವರದಿ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದವರು. (ದಕ್ಷಿಣ ಕನ್ನಡ 5, ಹಾಸನ 2, ಉಡುಪಿ 1, ಬೆಂಗಳೂರಿನಲ್ಲಿ ಒಬ್ಬರು).
58: ಆಸ್ಪತ್ರೆಯ ನಿಗಾ ಘಟಕದಲ್ಲಿರುವವರು.
71: ಈ ಹಿಂದೆ ನೆಗೆಟಿವ್ ವರದಿ ಬಂದವರ ಸಂಖ್ಯೆ.
48: ಗಂಟಲು ದ್ರಾವಣ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾದ ಶಂಕಿತರು.